ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿದೆ ನಿಷೇಧಿತ ಇ-ಸಿಗರೇಟ್: ಆಘಾತಕಾರಿ ಅಂಶ ಬಹಿರಂಗ
ನವದೆಹಲಿ, ಮಾರ್ಚ್. 30: ನಿಷೇಧದ ಹೊರತಾಗಿಯೂ, ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿವೆ ಎಂದು ಆಘಾತಕಾರಿ ಅಶಂವನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೆಟ್‌ಗಳ ಮೇಲೆ ನಿಷೇಧ ಹೇರಿ ಆದೇಶಿಸಿದೆ.
ನಿಷೇಧಿತ ಎಲೆಕ್ಟ್ರಾನಿಕ್ ಸಿಗರೆಟ್‌ಗಳು ತಂಬಾಕು ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿವೆ. ಇವುಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ನೇತೃತ್ವದ ಐದು ಸಂಸ್ಥೆಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ.

ಈ ಸಮೀಕ್ಷೆಯು ಕರ್ನಾಟಕ, ತೆಲಂಗಾಣ, ದೆಹಲಿ, ಅಸ್ಸಾಂ, ಗೋವಾ, ಹರಿಯಾಣ ಮತ್ತು ಉತ್ತರ ಪ್ರದೇಶ ಎಂಬ ಏಳು ರಾಜ್ಯಗಳಲ್ಲಿ ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ನೇತೃತ್ವದ ಐದು ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಸಮೀಕ್ಷೆಯಲ್ಲಿ ಈ ಸಿಗರೇಟ್ ಮಾರಾಟ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ.
ಸಮೀಕ್ಷೆಯಲ್ಲಿ ಮತ್ತಷ್ಟು ಆತಂಕಕಾರಿ ಅಂಧಗಳು ಬೆಳಕಿಗೆ ಬಂದಿವೆ. ಇ-ಸಿಗರೇಟ್‌ಗಳನ್ನು ನಿಷೇಧಿಸುವ ಕಾನೂನಿನ ಬಗ್ಗೆ ಹೆಚ್ಚಿನ ಮಾರಾಟಗಾರರಿಗೆ ತಿಳಿದಿಲ್ಲ. ಈ ಉತ್ಪನ್ನಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ ಹೀಗಾಗಿ ಯಾವುದೇ ವಯಸ್ಸಿನ ಪರಿಶೀಲನೆಯಿಲ್ಲದೆ ಎರಡು ದಿನಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿವೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.
ಇ-ಸಿಗರೇಟ್ ನಿಷೇಧದ ಉಲ್ಲಂಘನೆಯ ಪುರಾವೆಗಳನ್ನು ಖಚಿತಪಡಿಸಿಕೊಳ್ಳಲು ಕ್ಷಿಪ್ರ ಸಮೀಕ್ಷೆ ಮತ್ತು ಮಾದರಿ ಸಂಗ್ರಹಣೆಯನ್ನು ಮಾಡಲಾಗಿದೆ. ಇದರಲ್ಲಿ ಅಂಗಡಿಗಳು ಮತ್ತು ಮಾರಾಟಗಾರರನ್ನು ತನಿಖೆಗಾಗಿ ಆಯ್ಕೆ ಮಾಡಲಾಗಿದೆ. ಸಮೀಕ್ಷೆಯನ್ನು ನಡೆಸಿ, ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳಲ್ಲಿ ಪುರಾವೆಗಳನ್ನು ಸಂಗ್ರಹಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧವು ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಂಘಟಿತ ಪ್ರಯತ್ನವು ತುರ್ತಾಗಿ ಅಗತ್ಯವಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಡಾ. ಅಶೋಕ್ ಪಾಟೀಲ್ ಹೇಳಿದ್ದಾರೆ.
ಮಾರ್ಚ್ 21 ರವರೆಗೆ ಬೆಂಗಳೂರಿನಲ್ಲಿ ನಡೆಸಿದ ಜಾರಿ ಕಾರ್ಯಾಚರಣೆಗಳಲ್ಲಿ, ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ - 2019 ಮತ್ತು ಸಿಗರೇಟ್‌ಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯಿದೆ 2003 (COTPA 2003) ಅಡಿಯಲ್ಲಿ 8.9 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಇ-ಸಿಗರೇಟ್‌ಗಳು (681 ಸಂಖ್ಯೆಗಳು) ಮತ್ತು ಅಕ್ರಮ ವಿದೇಶಿ ಸಿಗರೇಟ್‌ಗಳನ್ನು (805 ಪ್ಯಾಕ್‌ಗಳು) ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು, ಮಂಗಳೂರಿನ ಸೈಬೀನ್ ಕಾಂಪ್ಲೆಕ್ಸ್‌ನಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಐವರನ್ನು ಬರ್ಕೆ ಪೊಲೀಸರು ಮಾ.29ರಂದು ಬಂಧಿಸಿದ್ದಾರೆ. ಬಂಧಿತರನ್ನು ರೆಹಮತುಲ್ಲಾ, ಸಂತೋಷ್, ಶಿವು ಅಲಿಯಾಸ್ ಶಿವಾನಂದ, ಹಸನ್ ಷರೀಫ್ ಮತ್ತು ಇರ್ಷಾದ್ ಎಂದು ಗುರುತಿಸಲಾಗಿದೆ.
ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆದ ಬರ್ಕೆ ಪೊಲೀಸರು ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನಲ್ಲಿರುವ 6 ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಮಂತ್ರಣ, ಫೆಂಟಾಸ್ಟಿಕ್ ವರ್ಲ್ಡ್, ಯೂನಿಕ್ ವರ್ಲ್ಡ್, ಡು ಇಟ್, ಫೆಂಟಾಸ್ಟಿಕ್ ಶಾಪ್ ಮತ್ತು ವೆಂಚರ್ ಅಂಗಡಿಗಳಲ್ಲಿ ಇ-ಸಿಗರೇಟ್ ಮತ್ತು ವಿದೇಶೀ ನಿರ್ಮಿತ ಸಿಗರೇಟ್‌ಗಳು ಪತ್ತೆಯಾಗಿವೆ.
1.5 ಲಕ್ಷ ಮೌಲ್ಯದ 273 ಇ-ಸಿಗರೇಟ್‌ಗಳು ಮತ್ತು ಯಾವುದೇ ಆರೋಗ್ಯ ಎಚ್ಚರಿಕೆಯಿಲ್ಲದೆ 5.3 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ನಿರ್ಮಿತ ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಐಪಿಎಸ್ ಅವರ ನಿರ್ದೇಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅಂಶುಕುಮಾರ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬರ್ಕೆ ಕೇಂದ್ರ ಉಪವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.












Click it and Unblock the Notifications