ಬ್ಯಾಂಕ್ ಸಾಲ ಬಾಕಿ ಹಗರಣ: ಮಾಜಿ ಮುಖ್ಯಮಂತ್ರಿ ಪುತ್ರ ಬಂಧನ
ಗುವಾಹತಿ/ನವದೆಹಲಿ, ನವೆಂಬರ್ 8: ಬ್ಯಾಂಕ್ ಸಾಲ ಪಾವತಿಸದೆ ವಂಚನೆ ಮಾಡಿದ ಆರೋಪದ ಮೇಲೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಪುತ್ರ ಅಶೋಕ್ ಸೈಕಿಯಾರನ್ನು ಸಿಬಿಐ ತಂಡ ಬಂಧಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೇವವ್ರತ ಸೈಕಿಯಾರ ಸೋದರ ಅಶೋಕ್ ರನ್ನು ಗುವಾಹತಿಯಲ್ಲಿ ಬಂಧಿಸಿದ್ದಾರೆ. ಸಾರುಮಾಟರಿಯಾ ನಿವಾಸದಲ್ಲಿದ್ದ ಅಶೋಕ್ ಸೈಕಿಯಾ ಮೇಲೆ 9.37 ಲಕ್ಷ ರು ಸಾಲ ಹಿಂದಿರುಗಿಸದ ಆರೋಪವಿದೆ. ಅಸ್ಸಾಂ ರಾಜ್ಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ASCARDB) ನಿಂದ 1996ರಲ್ಲಿ ಸಾಲ ಪಡೆದಿದ್ದ ಸೈಕಿಯಾ ನಂತರ ಅಸಲು, ಬಡ್ಡಿ ಏನೂ ಪಾವತಿಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
1998ರಲ್ಲೇ ಈ ಬಗ್ಗೆ ಮೊದಲ ದೂರು ದಾಖಲಾಗಿತ್ತು. 1998ರಲ್ಲಿ ಗುವಾಹತಿಯ ಪಲ್ಟಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿರಲಿಲ್ಲ. ನಂತರ ಈ ಪ್ರಕರಣವನ್ನು 2001ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಹೊಸದಾಗಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಯಿತು, ಆದರೆ, 10 ವರ್ಷಗಳ ಬಳಿಕ ಈ ಪ್ರಕರಣದಲ್ಲಿ ಬಂಧನವಾಗಿದೆ.
ಆರೋಪ ತಳ್ಳಿಹಾಕಿದ ಸೈಕಿಯ
"ನನ್ನ ಸೋದರ(ಅಶೋಕ್)ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ಇದು ರಾಜಕೀಯ ಷಡ್ಯಂತ್ರ, ಸಾಲವನ್ನು ಹಲವರು ವರ್ಷಗಳ ಹಿಂದೆಯೇ ತೀರಿಸಿದ್ದಾನೆ, ಆದರೆ, ಹಳೆ ಪ್ರಕರಣವನ್ನು ಮತ್ತೊಮ್ಮೆ ಮುನ್ನೆಲೆ ತರಲಾಗಿದೆ. ನ್ಯಾಯಾಲಯದಲ್ಲಿ ಆತನಿಗೆ ಜಯ ಸಿಗಲಿದೆ,'' ಎಂದು ವಿಪಕ್ಷ ನಾಯಕ ದೇವವ್ರತ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡುವ ಸಲುವಾಗಿ ಕಾಂಗ್ರೆಸ್ ಪಕ್ಷವು ಸೈಕಿಯಾ ಅವರು ಸಾಲ ಪಡೆದ ಬ್ಯಾಂಕಿನ ವಹಿವಾಟು ವಿವರಗಳನ್ನು ಪ್ರಕಟಿಸಿದೆ. ಸೈಕಿಯಾ ಅವರು 1996ರಲ್ಲಿ 9,37,701 ರು ಸಾಲ ಪಡೆದುಕೊಂಡಿದ್ದು, ಈ ಮೊತ್ತವನ್ನು ವೈಯಕ್ತಿಕ ವ್ಯಾಪಾರ, ವ್ಯವಹಾರಕ್ಕೆ ಬಳಸಿಕೊಂಡಿದ್ದಾರೆ. 2015ರಲ್ಲಿ ಸಾಲ ಬಾಕಿ ತೀರಿಸಿದ್ದಾರೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಎಚ್. ಎನ್ ಬೋರಾ ಅಕ್ಟೋಬರ್ 10, 2015 ಈ ಕುರಿತಂತೆ ಸೈಕಿಯಾರಿಗೆ ಸ್ವೀಕೃತಿ ಪತ್ರ ನೀಡಿದ್ದಾರೆ ಎಂದು ಹೇಳಲಾಗಿದೆ.