ಭಾರತದ ವಿರುದ್ಧ ರೊಚ್ಚಿಗೆದ್ದ ಬಾಂಗ್ಲಾದೇಶ ವಿರೋಧ ಪಕ್ಷಗಳು: ಕಾರಣ ಏನು?
ಬಾಂಗ್ಲಾದೇಶದ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಮುಳ್ಳಿನ ಮೇಲೆ ಬಟ್ಟೆ ಸಿಲುಕಿದ ಸ್ಥಿತಿಯಲ್ಲೀಗ ನೆರೆ ದೇಶದ ಜೀವನ ಪರದಾಡುತ್ತಿದೆ. ಒಂದು ಕಡೆ ದಂಗೆ ಎದ್ದ ವಿದ್ಯಾರ್ಥಿಗಳು ಬಾಂಗ್ಲಾದ ಅಲ್ಪಸಂಖ್ಯಾತ ಜನರ ಮೇಲೆ ದಾಳಿ ಮಾಡಿರುವ ಆರೋಪ ಇದೆ. ಇನ್ನೊಂದು ಕಡೆ ನಮ್ಮ ಭಾರತದ ಸಹಾಯ ಪಡೆದು ಸ್ವತಂತ್ರ್ಯ ಪಡೆದ ದೇಶವೇ ಈಗ ಭಾರತದ ವಿರುದ್ಧ ತಿರುಗಿಬೀಳುವ ಮುನ್ಸೂಚನೆ ನೀಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಬಾಂಗ್ಲಾದ ವಿರೋಧ ಪಕ್ಷಗಳು ಭಾರತದ ಬಗ್ಗೆ ಏನು ಹೇಳಿವೆ ಗೊತ್ತಾ?
ಅಷ್ಟಕ್ಕೂ ಬಾಂಗ್ಲಾದೇಶ ಕೆಲವು ದಿನಗಳ ಹಿಂದಷ್ಟೇ ನೆಮ್ಮದಿ ಆಗಿತ್ತು, ಜನರು ಖುಷಿಯಾಗಿದ್ರು. ಹೀಗೆ ನೆಮ್ಮದಿಯಾಗಿದ್ದ ಬಾಂಗ್ಲಾದೇಶದಲ್ಲಿ ಸಂತಸವನ್ನ ಹಾಳು ಮಾಡಿದ್ದೆ ಮೀಸಲಾತಿ ಚರ್ಚೆ 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಹೋರಾಟಗಾರರಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರವೇ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ನಿರ್ಧಾರ ವಿರೋಧಿಸಿ ಮೊದಲಿಗೆ ಪ್ರತಿಭಟನೆ ಶುರು ಮಾಡಿದ್ದ ವಿದ್ಯಾರ್ಥಿ ಸಂಘಟನೆಗಳು ನಂತರ ಹಿಂಸಾಚಾರಕ್ಕೆ ಇಳಿದವು. ಹೀಗಾಗಿ ಅಲ್ಲಿ ಸರ್ಕಾರ ಬಿದ್ದು ಹೋಗಿ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೇಖ್ ಹಸೀನಾ ಅವರು ಇದೀಗ ಭಾರತಕ್ಕೆ ಓಡಿ ಬಂದಿದ್ದಾರೆ. ಈ ಬಗ್ಗೆ ಬಾಂಗ್ಲಾದೇಶ ವಿರೋಧ ಪಕ್ಷಗಳೂ ಆಕ್ರೋಶ ಹೊರ ಹಾಕುತ್ತಿವೆ.

ಭಾರತದ ಜೊತೆಗೆ ಬಾಂಗ್ಲಾ ಕಿರಿಕ್?
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಓಡಿ ಬಂದು ತಲೆ ಮರೆಸಿಕೊಂಡ ಬಗ್ಗೆ ಇದೀಗ ಬಾಂಗ್ಲಾದೇಶದ ವಿರೋಧ ಪಕ್ಷ ಬಿಎನ್‌ಪಿ ತೀವ್ರ ಆಕ್ರೋಶ ಹೊರ ಹಾಕುತ್ತಿದೆ. ಅಂದಹಾಗೆ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತ ನಿಲುವಿಗೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖ್ಯಸ್ಥ ಗಾಯೇಶ್ವರ್ ರಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಷ್ಟೇ ಅಲ್ಲದೆ ಭಾರತದ ಜೊತೆಗೆ ಕಿರಿಕ್ ಶುರುವಾಗುವ ಮುನ್ಸೂಚನೆ ಕೂಡ ನೀಡಿದ್ದಾರೆ.
ಪಕ್ಷವನ್ನು ಭಾರತ ಬೆಂಬಲಿಸಬಾರದಂತೆ!
ಭಾರತ ಮತ್ತು ಬಾಂಗ್ಲಾದೇಶ ಸ್ನೇಹ ಪ್ರಸ್ತಾಪ ಮಾಡಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖ್ಯಸ್ಥ ಗಾಯೇಶ್ವರ್ ರಾಯ್, ನಮ್ಮ ಶತ್ರುಗೆ ನೀವು ಸಹಾಯ ಮಾಡಿದರೆ ಪರಸ್ಪರ ಸಹಕಾರ ಕಷ್ಟವಾಗಲಿದೆ. ಹಾಗೇ ಮತ್ತೊಂದು ಕಡೆ ಶೇಖ್ ಹಸೀನಾ ಮತ್ತೆ ಅಧಿಕಾರಕ್ಕೆ ಬರಲು ಭಾರತ ಸಹಾಯ ಮಾಡಲಿದೆ ಎಂಬ ಮಾತು ಕೇಳಿಬರುತ್ತಿವೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಎರಡೂ ರಾಷ್ಟ್ರಗಳ ಜನರ ನಡುವೆ ಪರಸ್ಪರ ಯಾವುದೇ ಸಮಸ್ಯೆ ಇಲ್ಲ. ಭಾರತ ಒಂದು ಪಕ್ಷವನ್ನ ಬೆಂಬಲಿಸುವ ಬದಲು, ಇಡೀ ರಾಷ್ಟ್ರವನ್ನು ಬೆಂಬಲಿಸಬೇಕು ಎಂದಿದ್ದಾರೆ ಬಿಎನ್‌ಪಿ ಮುಖ್ಯಸ್ಥ ಗಾಯೇಶ್ವರ್ ರಾಯ್.
'ನಾವು ಭಾರತ ವಿರೋಧಿ ಅಲ್ಲ!'
ಹಾಗೇ ಇದೇ ವೇಳೆ, ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಭಾರತವು ಸಹಾಯ ಮಾಡಿದೆ. ನಮ್ಮ ಪಕ್ಷ ಭಾರತದ ವಿರೋಧಿ ಅಲ್ಲ ಎಂಬುದನ್ನ ಕೂಡ ಗಾಯೇಶ್ವರ್ ರಾಯ್ ಈಗ ಸ್ಪಷ್ಟಪಡಿಸಿದ್ದಾರೆ. ಆದರೆ ಬಾಂಗ್ಲಾದ ಆಂತರಿಕ ವಿಚಾರದಲ್ಲಿ ಯಾರೂ ಎಂಟ್ರಿ ಆಗಬಾರದು ಎಂಬ ರೀತಿಯಲ್ಲಿ ಎಚ್ಚರಿಕೆ ಸಂದೇಶ ಬಾಂಗ್ಲಾದ ವಿರೋಧ ಪಕ್ಷ ರವಾನೆ ಮಾಡಿದೆ. ಇದೀಗ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ದೆಹಲಿ ಸಮೀಪದ ವಾಯು ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.












Click it and Unblock the Notifications