ಅಯೋಧ್ಯಯ ರಾಮ ಮಂದಿರದ ಭದ್ರತೆಗೆ ಬೆದರಿಕೆ? ಅನುಮಾನಾಸ್ಪದ ಮೇಲ್ ಪತ್ತೆ
ಅಯೋಧ್ಯೆ ಏಪ್ರಿಲ್ 15: ಉತ್ತರಪ್ರದೇಶದ ಅಯೋಧ್ಯ ರಾಮ ಮಂದಿರ ಟ್ರಸ್ಟ್‌ಗೆ ಅನುಮಾನಾಸ್ಪದ ಇಮೇಲ್ ಒಂದು ಬಂದಿದೆ. ರಾಮ ಮಂದಿರದ ಭದ್ರತೆಗೆ ಬೆದರಿಕೆ ಇರುವ ಬಗ್ಗೆ ಇಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಭದ್ರತಾ ಸಂಸ್ಥೆಗಳು ಟ್ರಸ್ಟ್ ಸಹಯೋಗದೊಂದಿಗೆ ಅನುಮಾನಾಸ್ಪದ ಇಮೇಲ್ ಬಗ್ಗೆ ತನಿಖೆ ಆರಂಭಿಸಿವೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸೋಮವಾರ ಈ ಅನುಮಾನಾಸ್ಪದ ಇಮೇಲ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಟ್ರಸ್ಟ್ ಅಥವಾ ಭದ್ರತಾ ಸಂಸ್ಥೆಗಳು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ರಾಮಮಂದಿರದ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಮಮಂದಿರಕ್ಕೆ ಆಗಾಗ ಬೆದರಿಕೆ ಸಂದೆಶಗಳು ಹೆಚ್ಚಾಗಿದ್ದು ರಾಮ ಮಂದಿರದ ಸುತ್ತಲೂ ಹೈಟೆಕ್ ಸೆನ್ಸರ್‌ಗಳನ್ನು ಹೊಂದಿರುವ ಭದ್ರತಾ ಗೋಡೆ ನಿರ್ಮಾಣ ಮಾಡುವ ಯೋಜನೆಯನ್ನು ಚುರುಕುಗೊಳಿಸಲಾಗಿದೆ. ಜೈಲಿನ ಗೋಡೆಗಿಂತ ರಾಮಮಂದಿರ ಭದ್ರತಾ ಗೋಡೆ ಬಲವಾಗಿರುತ್ತದೆ.

ಹೌದು ರಾಮಮಂದಿರದ ಸುತ್ತಲೂ 4 ಕಿಲೋಮೀಟರ್ ಉದ್ದದ ಭದ್ರತಾ ಗೋಡೆಯ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದರ ನಿರ್ಮಾಣದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ಎಂಜಿನಿಯರ್ ಇಂಡಿಯಾ ಲಿಮಿಟೆಡ್ ಕಂಪನಿಗೆ ವಹಿಸಲಾಗಿದೆ. ಇದರ ನಿರ್ಮಾಣವು 18 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಭದ್ರತಾ ಗೋಡೆಗೆ ಅತ್ಯಾಧುನಿಕ ತಂತ್ರಜ್ಞಾನದ ಸಂವೇದಕಗಳನ್ನು ಅಳವಡಿಸಲಾಗುತ್ತದೆ. ಯಾವುದೇ ಭದ್ರತಾ ಉಲ್ಲಂಘನೆಯ ಸಂದರ್ಭದಲ್ಲಿ ಅವು ತಕ್ಷಣವೇ ಎಚ್ಚರಿಕೆ ನೀಡುತ್ತವೆ. ಅಲ್ಲದೆ ಜೈಲಿನ ಗೋಡೆಗಿಂತ ರಾಮಮಂದಿರ ಭದ್ರತಾ ಗೋಡೆ ಬಲವಾಗಿರುತ್ತದೆ ಎಂದು ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.
ಮೂರು ಹೊಸ ಪ್ರಮುಖ ಕಾರ್ಯಗಳು
ಅಯೋಧ್ಯೆಯ ಸರ್ಕ್ಯೂಟ್ ಹೌಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಸಮಿತಿಯ ಮೂರು ದಿನಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಕುರಿತು ಮಿಶ್ರಾ ಮಾತನಾಡಿದರು. ಮುಂದಿನ 6 ತಿಂಗಳಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವತ್ತ ಸಾಗಬೇಕು ಎಂಬುದು ನಮ್ಮ ಪ್ರಯತ್ನವಿದೆ. ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಮೂರು ಪ್ರಮುಖ ಕಾಮಗಾರಿಗಳು ಪ್ರಾರಂಭವಾಗುತ್ತವೆ. ಮೊದಲನೆಯದಾಗಿ ಭದ್ರತಾ ಉದ್ದೇಶಗಳಿಗಾಗಿ ದೇವಾಲಯ ಸಂಕೀರ್ಣದ ಒಳಗೆ ಸುಮಾರು 4 ಕಿಲೋಮೀಟರ್ ಉದ್ದದ ಭದ್ರತಾ ಗೋಡೆಯನ್ನು ನಿರ್ಮಿಸಲಾಗುವುದು. ಗೋಡೆಯ ಎತ್ತರ, ದಪ್ಪ ಮತ್ತು ಆಕಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎರಡನೆಯ ಕೆಲಸ, ಪ್ರಯಾಣಿಕರ ಅನುಕೂಲ ಕೇಂದ್ರದ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸಲಾಗುವುದು. ಭಕ್ತರ ಅನುಕೂಲಕ್ಕಾಗಿ ರಾಮ ಮಂದಿರ ಸಂಕೀರ್ಣದಲ್ಲಿಯೇ ಲಭ್ಯವಿರುವ ಭೂಮಿಯಲ್ಲಿ ಶೂ ರ‍್ಯಾಕ್‌ಗಳು ಮತ್ತು ಇತರ ವಸ್ತುಗಳನ್ನು ಇಡಲು 62 ಕೌಂಟರ್‌ಗಳನ್ನು ಮಾಡಲಾಗುವುದು.
ಇನ್ನೂ ಮೂರನೆಯ ಪ್ರಮುಖ ಕೆಲಸವೆಂದರೆ 10 ಎಕರೆ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ. ಇದರಲ್ಲಿ ಹಸಿರಿನ ನಡುವೆ ಧ್ಯಾನ ಕೇಂದ್ರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಹತ್ತು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ನೃಪೇಂದ್ರ ಮಿಶ್ರಾ ಅವರು ಹೇಳಿದರು. ಮರಗಳು ಮತ್ತು ಸಸ್ಯಗಳಿಗೆ ಹಾನಿಯಾಗದಂತೆ ಪಂಚವಟಿ ಎಂಬ ಹೆಸರಿನ ಉದ್ಯಾನವನವನ್ನು ನಿರ್ಮಿಸಲಾಗುವುದು.
ದೇವಾಲಯದ ಆವರಣದ ಮಣ್ಣು ಹೊರಗೆ ಹೋಗುವುದಿಲ್ಲ. ಅದೇ ಮಣ್ಣಿನಿಂದ ಧ್ಯಾನ ಸ್ಥಳ ಮತ್ತು ಉದ್ಯಾನವನವನ್ನು ನಿರ್ಮಿಸಲಾಗುತ್ತದೆ. ರಾಮ ಜನ್ಮಸ್ಥಳದ ಮಣ್ಣು ಹೊರಗೆ ಹೋಗುವುದನ್ನು ನಾವು ಬಯಸುವುದಿಲ್ಲ. ರಾಮ ಭಕ್ತರ ನಂಬಿಕೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರಬಾರದು ಎಂದು ಮಿಶ್ರಾ ಹೇಳಿದ್ದಾರೆ.












Click it and Unblock the Notifications