ವಂಚನೆ ಪ್ರಕರಣ: ಅಸ್ಸಾಂ ಲೇಡಿ ಸಿಂಗಮ್ ಬಂಧನ
ಗುವಾಹಟಿ ಜೂನ್ 5: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಡಿ ಸಿಂಗಮ್ ಎಂದೇ ಖ್ಯಾತಿಯಾಗಿರುವ ಅಸ್ಸಾಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜುನ್ಮೋನಿ ರಾಭಾ ಶನಿವಾರ ಬಂಧನಕ್ಕೆ ಒಳಗಾಗಿದ್ದಾರೆ.
ಜುನ್ಮೋನಿ ರಾಭಾ ಅವರು ಈ ವರ್ಷ ಎರಡು ಬಾರಿ ಸುದ್ದಿಯಲ್ಲಿದ್ದರು. ಈ ಹಿಂದೆ ಅಸ್ಸಾಂನ ಬಿಹುಪುರಿಯಾ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗೆ ರಾಭಾ ಅವರು ನಡೆಸಿದ ಟೆಲಿಫೋನ್ ಕಾಲ್ ಆಡಿಯೊ ಲೀಕ್ ಆಗಿತ್ತು. ಅಲ್ಲದೇ ಕಳೆದ ತಿಂಗಳು ವಂಚನೆ ಪ್ರಕರಣದಲ್ಲಿ ಸ್ವತಃ ಭಾವಿ ಪತಿಯನ್ನೇ ರಾಭಾ ಬಂಧಿಸಿದ್ದರು.
ಸತತ ಎರಡು ದಿನಗಳ ವಿಚಾರಣೆಯ ನಂತರ ಈಗ ಇದೇ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜುನ್ಮೋನಿ ರಾಭಾ ಅವರನ್ನು ಮಜೌಲಿನಲ್ಲಿ ಶನಿವಾರ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಇವರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಸೇರಿದಂತೆ ವಿವಿಧ ಆರೋಪಗಳ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರನ್ನು ಮಜೌಲಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರತ್ಯೇಕ ಎಫ್‌ಐಆರ್ ದಾಖಲು
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರಾದ ರಾಮ್ ಅಬತ್ರಾ ಶರ್ಮಾ ಮತ್ತು ಅಜಿತ್ ಬೋರಾ ಹಾಗೂ ರಭಾ ಅವರ ಭಾವಿ ಪತಿ ರಾಣಾ ಪೊಗಾಗ್ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ಗಳು ದಾಖಲಾಗಿದೆ. 2021 ರ ಅಕ್ಟೋಬರ್ ನಲ್ಲಿ ರಭಾ ಮತ್ತು ರಾಣಾ ಅವರ ನಿಶ್ಚಿತಾರ್ಥವಾಗಿತ್ತು. ಈ ವರ್ಷದ ನವೆಂಬರ್ ನಲ್ಲಿ ಅವರ ವಿವಾಹ ಆಗಬೇಕಿತ್ತು. ವಂಚನೆ ಪ್ರಕರಣದಲ್ಲಿ ರಾಣಾ ಅವರೊಂದಿಗೆ ರಭಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ರಾಭಾ ಅವರನ್ನು ಮಜುಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು.

ಕಲಿಯಾಬೋರ್ ಠಾಣೆಗೆ ವರ್ಗಾವಣೆ
ಈ ಸಂದರ್ಭದಲ್ಲಿ ರಭಾ ವಿರುದ್ಧ ಭ್ರಷ್ಟಾಚಾರದ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ನಾಗಾನ್ ಜಿಲ್ಲೆಯ ಕಲಿಯಾಬೋರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಭ್ರಷ್ಟಾಚಾರ ಆರೋಪ ಸಂಬಂಧ ಜೂನ್ 3ರಂದು ಪೊಲೀಸರು ರಭಾರನ್ನು ವಿಚಾರಣೆಗೆ ಒಳಪಡಿಸಿದ್ದರು.
ಕೆಲಸ ಕೊಡಿಸುವುದಾಗಿ ವಂಚನೆ
ಇನ್ನೊಂದೆಡೆ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಕೋಟ್ಯಂತರ ರುಪಾಯಿ ವಂಚಿಸಿರುವ ಆರೋಪದಲ್ಲಿ ರಾಣಾನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ರಾಣಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 170, 406, 419, 420, 468, 471 ಮತ್ತು 472 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆತ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾನೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications