ಪ್ರವಾಹದ ನೀರನ್ನೇ ಬಂಡವಾಳವಾಗಿಸಿಕೊಂಡ ರೈತ: ಇಡೀ ಹಳ್ಳಿಯನ್ನೇ ಮೀನುಗಾರಿಕಾ ಗ್ರಾಮವನ್ನಾಗಿಸಿದ ನಜ್ರುಲ್ ಹಕ್!
ಭಾರತದ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮಳೆಗಾಲ ಬಂತೆಂದರೆ ಸಾಕು, ನದಿಗಳು ಉಕ್ಕಿ ಹರಿದು ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತವಾಗುತ್ತದೆ. ಪ್ರವಾಹದ ಕಾರಣದಿಂದಾಗಿ ಬೆಳೆ ನಾಶವಾಗಿ ಮಳೆಗಾಲದಲ್ಲಿ ರೈತರು ಕಣ್ಣೀರು ಹಾಕುವುದು ಅಲ್ಲಿನ ಸಾಮಾನ್ಯ ದೃಶ್ಯ. ಆದರೆ, ಶ್ರೀಭೂಮಿ ಜಿಲ್ಲೆಯ ಅಲೆಖಾರ್ಗುಲ್ ಗ್ರಾಮದ ರೈತ ನಜ್ರುಲ್ ಹಕ್, ಈ ನೈಸರ್ಗಿಕ ವಿಕೋಪವನ್ನೇ ಹೊಸ ಅವಕಾಶವಾಗಿ ಬದಲಾಯಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.
ಹೌದು ನೋಡಿ, ಪ್ರವಾಹದ ನೀರನ್ನ ಶಾಪ ಎಂದು ಭಾವಿಸದೆ, ಅದೇ ನೀರಿನಲ್ಲಿ ಮೀನುಗಾರಿಕೆ ಆರಂಭಿಸುವ ಮೂಲಕ ತಮ್ಮ ಗ್ರಾಮದ ಭವಿಷ್ಯವನ್ನೇ ಬದಲಾಯಿಸಿರುವ ಅಸ್ಸಾಂ ರೈತನ ಯಶೋಗಾಥೆ ಇದು.

ಅಲೆಖಾರ್ಗುಲ್ ಎಂಬುದು ಪ್ರತಿ ವರ್ಷ ಮಳೆಗಾಲದಲ್ಲಿ ಮುಳುಗಡೆಯಾಗುವ ಪ್ರವಾಹ ಪೀಡಿತ ಪ್ರದೇಶ. ಇಲ್ಲಿನ ರೈತರು ಭತ್ತವನ್ನೇ ನಂಬಿ ಬದುಕುತ್ತಿದ್ದರು. ಆದರೆ, ಪ್ರವಾಹದಿಂದಾಗಿ ಬೆಳೆ ನಾಶವಾಗಿ ಸಾಲದ ಸುಳಿಗೆ ಸಿಲುಕುತ್ತಿದ್ದರು. 2000ನೇ ಇಸವಿಯಲ್ಲಿ ತಮ್ಮ ಪದವಿ ಮುಗಿಸಿದ ನಜ್ರುಲ್ ಹಕ್, ಎಲ್ಲರಂತೆ ಸರ್ಕಾರಿ ನೌಕರಿಯ ಹಿಂದೆ ಹೋಗಲಿಲ್ಲ. ಬದಲಿಗೆ, ತಿಂಗಳುಗಟ್ಟಲೆ ನಿಲ್ಲುವ ಪ್ರವಾಹದ ನೀರನ್ನೇ ಬಳಸಿ ಏನಾದರೂ ಸಾಧಿಸಬೇಕು ಎಂದು ನಿರ್ಧರಿಸಿದರು.
ಆರಂಭದಲ್ಲಿ ಸಣ್ಣ ಜಾಗದಲ್ಲಿ ಮೀನು ಸಾಕಾಣಿಕೆ ಶುರುಮಾಡಿದ ಅವರಿಗೆ ಉತ್ತಮ ಯಶಸ್ಸು ಸಿಕ್ಕಿತು. 2003ರಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ ಸಾಲ ಪಡೆದು, ತಮ್ಮ ಈ ವಿನೂತನ ಕೃಷಿಯನ್ನ ಇನ್ನಷ್ಟು ವಿಸ್ತರಿಸಿದರು.
ಲಾಭದಾಯಕವಾಗಿ ಬದಲಾದ ಮೀನು ಕೃಷಿ
ಸಾಂಪ್ರದಾಯಿಕವಾಗಿ ಪ್ರವಾಹದ ನೀರಿನಲ್ಲಿ ತೇಲಿಬರುವ ಮೀನುಗಳನ್ನ ಹಿಡಿಯುವುದು ಅಸ್ಸಾಂನಲ್ಲಿ ವಾಡಿಕೆ. ಆದರೆ ನಜ್ರುಲ್ ಅವರು ತಾವೇ ವೈಜ್ಞಾನಿಕವಾಗಿ ಮೀನು ಕೃಷಿ ಮಾಡಲು ಮುಂದಾದರು. ಅಂದ್ರೆ ನಿರ್ದಿಷ್ಟ ತಳಿಯ ಮೀನುಗಳನ್ನ ಕೆರೆಗೆ ಬಿಟ್ಟು, ನೀರಿನಲ್ಲಿ ಆಮ್ಲಜನಕದ ಮಟ್ಟ ಕಾಯ್ದುಕೊಳ್ಳಲು ಏರೇಟರ್‌ಗಳನ್ನ ಬಳಸಿ, ಸಾವಯವ ವಿಧಾನದಲ್ಲಿ ಮೀನು ಸಾಕಿದರು.
ಮೊದಲು ಒಂದು ಹೆಕ್ಟೇರ್‌ಗೆ ಕೇವಲ 5 ರಿಂದ 7 ಕ್ವಿಂಟಾಲ್ ಸಿಗುತ್ತಿದ್ದ ಮೀನು, ಇದೀಗ 60 ರಿಂದ 70 ಕೆಜಿಯಷ್ಟು (6 ರಿಂದ 7 ಟನ್) ಉತ್ಪಾದನೆಯಾಗುತ್ತಿದೆ.
ಪ್ರಸ್ತುತ ಅವರು 100 ಹೆಕ್ಟೇರ್ ಪ್ರದೇಶದಲ್ಲಿ ರೋಹು, ಕಾಟ್ಲಾ, ಸಿಂಘಿ, ಮಾಗುರ್ ಸೇರಿದಂತೆ ಹಲವು ಬಗೆಯ ಮೀನುಗಳನ್ನ ಸಾಕುತ್ತಿದ್ದಾರೆ.
ಇಡೀ ಹಳ್ಳಿಯೇ ಈಗ ಎಸ್‌ಬಿಐ ಮೀನುಗಾರಿಕಾ ಗ್ರಾಮ
ನಜ್ರುಲ್ ಅವರ ಈ ಯಶಸ್ಸು ಕೇವಲ ಅವರಿಗೆ ಮಾತ್ರ ಸೀಮಿತವಾಗಲಿಲ್ಲ. ಬೆಳೆ ನಷ್ಟದಿಂದಾಗಿ ಸಾಲಬಾದೆಗೆ ಸಿಲುಕಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಿದ್ದ 58 ವರ್ಷದ ಶ್ರೀರತನ್ ಎಂಬ ರೈತನಿಗೂ ನಜ್ರುಲ್ ಭರವಸೆಯ ಬೆಳಕಾದರು. ಮಾರ್ಗದರ್ಶನ ಪಡೆದು ಮೀನುಗಾರಿಕೆ ಆರಂಭಿಸಿದ ಶ್ರೀರತನ್, ಕೇವಲ ಮೂರು ತಿಂಗಳಲ್ಲಿ 1 ಲಕ್ಷ ರೂಪಾಯಿ ಆದಾಯ ಗಳಿಸಿದರು. ಇದನ್ನು ನೋಡಿದ ಗ್ರಾಮದ ಇತರ ಯುವಕರು ಹಾಗೂ ರೈತರೂ ಮೀನುಗಾರಿಕೆಯತ್ತ ಮುಖ ಮಾಡಿದರು.
ಇಂದು ಅಲೆಖಾರ್ಗುಲ್ ಗ್ರಾಮದ 300ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲವಾಗಿವೆ. ನಜ್ರುಲ್ ಹಕ್ ಅವರ ಶ್ರಮ ಮತ್ತು ಗ್ರಾಮದ ಈ ಸಾಧನೆಯನ್ನ ಗುರುತಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಈ ಹಳ್ಳಿಯನ್ನು ಅಧಿಕೃತವಾಗಿ ಎಸ್‌ಬಿಐ ಮೀನುಗಾರಿಕಾ ಗ್ರಾಮ ಎಂದು ನಾಮಕರಣ ಮಾಡಿದೆ.
ನಜ್ರುಲ್ ಹಕ್ ಅವರ ಈ ಅದ್ಭುತ ಸಾಧನೆಗಾಗಿ ಕೇಂದ್ರ ಸರ್ಕಾರವು ಅತ್ಯುತ್ತಮ ಭಾರತೀಯ ಮೀನುಗಾರ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, ಅಸ್ಸಾಂ ಸರ್ಕಾರವು ರಾಜ್ಯದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಅಸ್ಸಾಂ ಗೌರವ್' ಪ್ರಶಸ್ತಿಯನ್ನ ನೀಡಿ ಸನ್ಮಾನಿಸಿದೆ.


Click it and Unblock the Notifications
