ಬೆಂಗಳೂರಿನಂತೆ ಬುಂದೇಲ್ ಖಂಡ್ ಅಭಿವೃದ್ಧಿಯಾಗಬೇಕು!
ಹಮೀರ್‌ಪುರ್, ಅ, 30 : "ಬುಂದೇಲ್ ಖಂಡ್ ಜನತೆಯ ಕೂಗು ನವದೆಹಲಿಗೆ ಕೇಳಿಸುತ್ತಿದೆ. ಆದರೆ, ಲಕ್ನೋಗೆ ಕೇಳಿಸುತ್ತಿಲ್ಲ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬುಂದೇಲ್ ಖಂಡ್ ಬೆಂಗಳೂರಿನಂತೆ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ಬೆಂಬಲಿಸಿ ಎಂದು ರಾಹುಲ್ ಕರೆ ನೀಡಿದರು.
ಬುಧವಾರ ಬುಂದೇಲ್ ಖಂಡ್ ನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬುಂದೇಲ್ ಖಂಡ್ ಜನರು ದೊಡ್ಡ-ದೊಡ್ಡ ಕನಸುಗಳನ್ನು ಕಾಣಬೇಕು. ಇಲ್ಲಿ ಕೈಗಾರಿಕೋದ್ಯಮಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಎಂದು ಜನತೆಗೆ ಕರೆ ನೀಡಿದರು.

ಬುಂದೇಲ್ ಖಂಡ್ ನಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ, ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಜನರು ರೈಲ್ವೆ ಹಳಿಗಳನ್ನು ಕೇಳಬೇಡಿ.ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಸರ್ಕಾರ ಮೇಲೆ ಒತ್ತಡ ಹೇರಿ ಎಂದು ರಾಹುಲ್ ಗಾಂಧಿ ಹೇಳಿದರು.
ಬುಂದೇಲ್ ಖಂಡ್ ಬೆಂಗಳೂರಿನಂತೆ ಅಭಿವೃದ್ಧಿಯಾಗಬೇಕು. ಹೀಗೆ ಪ್ರದೇಶ ಅಭಿವೃದ್ಧಿ ಮಾಡಬೇಕಾದರೆ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ರಾಹುಲ್ ಗಾಂಧಿ ಮನವಿ ಮಾಡಿದರು. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿ ರಾಜ್ಯಗಳಿಗೆ ನೀಡಿದ ಹಣವನ್ನು ಜನರಿಗೆ ತಲುಪಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ರಾಹುಲ್ ಆರೋಪಿಸಿದರು.
ಕೇಂದ್ರ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ, ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತದೆ. ಅದರಂತೆ ಬುಂದೇಲ್ ಖಂಡ್ ಜಿಲ್ಲೆಗೂ ಅನುದಾನ ಬಿಡುಗಡೆ ಮಾಡಿದೆ. ಅದು ನಿಮಗೆ ತಲುಪಿದೆಯೇ ಎಂದು ಜನರನ್ನು ಪ್ರಶ್ನಿಸಿದರು. ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ರಾಹುಲ್ ಗಾಂಧಿ ಕರೆ ನೀಡಿದರು. (ಸಿಕ್ಕೇ ಬಿಡ್ತು 4000 ಕೋಟಿ ರೂ ಚಿನ್ನದ ನಿಕ್ಷೇಪ)












Click it and Unblock the Notifications