ಲಿವ್-ಇನ್ ಸಂಗಾತಿಯಿಂದ ಮತ್ತೊಂದು ಹತ್ಯೆ: ಮೃತದೇಹ ಬಚ್ಚಿಟ್ಟ ಮುಂಬೈ ಪಾತಕಿ ಅಂದರ್!
ಮುಂಬೈ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 37 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಲಿವ್-ಇನ್ ಸಂಗಾತಿ ಕೊಂದಿದ್ದಾರೆಂದು ಆರೋಪಿಸಲಾಗಿದೆ.
ಮುಂಬೈ ಫೆಬ್ರವರಿ 15: ದೆಹಲಿಯ ಶ್ರದ್ಧಾ ವಾಕರ್ ಪ್ರಕರಣದ ತನಿಖೆ ಚಾಲ್ತಿಯಲ್ಲಿರುವಾಗಲೇ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್ ಪ್ರಕರಣದಂತೆ ಮುಂಬೈನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಮುಂಬೈ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 37 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಲಿವ್-ಇನ್ ಸಂಗಾತಿ ಕೊಂದಿದ್ದಾರೆಂದು ಆರೋಪಿಸಲಾಗಿದೆ. ಆಕೆಯ ದೇಹವನ್ನು ಹಾಸಿಗೆಯ ಶೇಖರಣಾ ಕೋಣೆಯಲ್ಲಿ ಬಚ್ಚಿಡಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಆರೋಪಿಯನ್ನು ಹಾರ್ದಿಕ್ ಶಾ ಎಂದು ಗುರುತಿಸಲಾಗಿದ್ದು, ಈತ ಘಟನೆ ಬಳಿಕ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದನು. ಆದರೆ ರೈಲ್ವೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಮೇಘಾ ಎಂದು ಗುರುತಿಸಲಾಗಿದೆ. ಹಾರ್ದಿಕ್ ನಿರುದ್ಯೋಗಿಯಾಗಿದ್ದು, ನರ್ಸ್ ಮೇಘಾ ಮನೆಯ ಖರ್ಚನ್ನು ಭರಿಸುತ್ತಿದ್ದರು. ಇದರಿಂದ ಅವರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಕೊಲೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೃತದೇಹ ಬಚ್ಚಿಟ್ಟ ಮುಂಬೈ ಪಾತಕಿ ಅಂದರ್
ಮೇಘಾಳನ್ನು ಕೊಂದ ನಂತರ ಹಾರ್ದಿಕ್ ಮನೆಯ ಕೆಲ ವಸ್ತುಗಳನ್ನು ಮಾರಿ ಹಣದೊಂದಿಗೆ ಪರಾರಿಯಾಗಿದ್ದ. ಈತ ರೈಲಿನಲ್ಲಿ ಪರಾರಿಯಾಗುತ್ತಿದ್ದ ಎಂಬ ಮಾಹಿತಿ ಮೇರೆಗೆ ಪೊಲೀಸರು ಆತನ ಸ್ಥಳವನ್ನು ಪತ್ತೆ ಹಚ್ಚಿ, ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಪರಾಧ ವಿಭಾಗದ ತಂಡ ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ವರ್ಷಗಳಿಂದ ಸಂಬಂಧದಲ್ಲಿದ್ದ ಹಾರ್ದಿಕ್ ಮತ್ತು ಮೇಘಾ ಕಳೆದ ಆರು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ಬಾಡಿಗೆ ಮನೆಗೆ ತೆರಳಿದ್ದರು. ಅವರ ನೆರೆಹೊರೆಯವರು ಸಹ ಅವರ ಆಗಾಗ್ಗೆ ಜಗಳಗಳ ಬಗ್ಗೆ ದೂರು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

3,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಸುಮಾರು ಮೂರು ವರ್ಷದಿಂದ ಶ್ರದ್ಧಾ ವಾಲ್ಕರ್ ಜತೆ ಲಿವ್ ಇನ್ ಸಂಬಂಧ ಹೊಂದಿದ್ದ ಅಫ್ತಾಬ್ ಪೂನಾವಾಲಾ, ಕಳೆದ ವರ್ಷದ ಮೇ 18ರಂದು ದಿಲ್ಲಿಯ ಮೆಹ್ರೌಲಿ ಪ್ರದೇಶದಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ. ಇದಕ್ಕೂ ಮುನ್ನ ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಇದರ ನಂತರ 300 ಲೀಟರ್ ಸಾಮರ್ಥ್ಯದ ಬೃಹತ್ ಫ್ರಿಡ್ಜ್ ಖರೀದಿಸಿದ್ದ ಅಫ್ತಾಬ್, ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಅದರೊಳಗೆ ಇರಿಸಿದ್ದ.
ಆಕೆಯ ದೇಹ ಕತ್ತರಿಸಲು ಗರಗಸ ಹಾಗೂ ಕತ್ತಿಯನ್ನು ಬಳಸಿದ್ದ. ಅದನ್ನು ಗುರುಗ್ರಾಮದ ಒಂದು ಪೊದೆಯೊಂದರಲ್ಲಿ ಎಸೆದಿದ್ದ. ಇನ್ನು ದೇಹದ ಭಾಗಗಳನ್ನು ಒಂದೊಂದಾಗಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ನಗರದ ಭಾಗದ ಕಾಡಿನಲ್ಲಿ ದೊರೆತಿದ್ದ ಮೂಳೆಗಳು ಶ್ರದ್ಧಾಳದ್ದೇ ಎನ್ನುವುದು ಡಿಎನ್‌ಎ ಪರೀಕ್ಷೆ ವರದಿಯಿಂದ ಕಳೆದ ತಿಂಗಳು ಖಚಿತವಾಗಿತ್ತು. ಪಾತಕಿ ಅಫ್ತಾಬ್ ಪೂನಾವಾಲಾ ವಿರುದ್ಧ ದಿಲ್ಲಿ ಪೊಲೀಸರು ಸುಮಾರು 3,000 ಪುಟಗಳ ಕರಡು ಆರೋಪಪಟ್ಟಿ ಸಿದ್ಧಪಡಿಸಿದ್ದಾರೆ. ಈ ಘಟನೆ ಬಳಿಕ ಹಲವಾರು ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ.

ದೇಹವನ್ನು 15 ತುಂಡುಗಳನ್ನಾಗಿ ಕತ್ತರಿಸಿದ ಆಟೋ ಚಾಲಕ
ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಲ್ಲಿ 40 ವರ್ಷದ ಆಟೋ ರಿಕ್ಷಾ ಚಾಲಕನೊಬ್ಬ, ಆಕೆಯ ಸ್ನೇಹಿತನನ್ನು ಕೊಂದು, ದೇಹವನ್ನು 15 ತುಂಡುಗಳನ್ನಾಗಿ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆರೋಪಿಯನ್ನು ಪ್ರಜಾಪತಿ ಹಾಗೂ ಮೃತ ವ್ಯಕ್ತಿಯನ್ನು ಅಕ್ಷಯ್ ಕುಮಾರ್ ಎಂದು ಗುರುತಿಸಲಾಗಿದೆ.

ಹಿಮಾಚಲಪ್ರದೇಶದ ಕುಲುವಿನಲ್ಲಿ ಶವ ಎಸೆದ ಪ್ರೇಮಿ
ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಥೇಟ್ ಶ್ರದ್ಧಾ ವಾಕರ್ ಪ್ರಕರಣದಂತೆ ಘಟನೆ ನಡೆದಿದೆ. ಸಹಜೀವನ ನಡೆಸುತ್ತಿದ್ದ ಯುವತಿಯನ್ನು ಪ್ರೇಮಿ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದ ಕುಲುವಿನಲ್ಲಿ ಎಸೆದು ಬಂದ ಅಘಾತಕಾರಿ ಪ್ರಕರಣ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಯಲಾಗಿದೆ. ಗಾಜಿಯಾಬಾದ್ ಮೂಲದ ಕೊಲೆಯಾದ ಯುವತಿ ಕುಟುಂಬದೊಂದಿಗೆ ದೂರವಾಗಿ ಆರೋಪಿ ರಾಮನ್ ಎಂಬಾತನ ಜೊತೆಗೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಮದುವೆ ವಿಷಯಕ್ಕಾಗಿ ಇಬ್ಬರ ಮಧ್ಯೆ ನಡೆದ ಜಗಳದಲ್ಲಿ ಯುವಕ, ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದಲ್ಲಿ ಬಿಸಾಡಿದ್ದಾನೆ.












Click it and Unblock the Notifications