ಶ್ರದ್ಧಾ ವಾಕರ್‌ನಂತೆ ಮತ್ತೊಂದು ಘಟನೆ: ದೆಹಲಿಯಲ್ಲಿ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ಪತ್ತೆ
ದೆಹಲಿ ಜುಲೈ 12: ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ಪೂರ್ವ ದೆಹಲಿಯ ಗೀತಾ ಕಾಲೋನಿ ಫ್ಲೈಓವರ್ ಬಳಿ ಬುಧವಾರ ಪತ್ತೆಯಾಗಿವೆ. ಬೆಳಗ್ಗೆ 9.15ರ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿದಾಗ ಮಹಿಳೆಯ ದೇಹದ ಕತ್ತರಿಸಿದ ಭಾಗಗಳು ಸಿಕ್ಕಿವೆ. ಫ್ಲೈಓವರ್ ಬಳಿ ಹಲವೆಡೆ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎನ್ನಲಾಗಿದೆ.
ಸಂತ್ರಸ್ತೆಯ ದೇಹದ ಕೆಲವು ಭಾಗಗಳಾದ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ. ದೇಹದ ಉಳಿದ ಭಾಗಗಳನ್ನು ಪತ್ತೆ ಮಾಡಲು ಪೊಲೀಸ್ ತಂಡವು ಫ್ಲೈಓವರ್ ಬಳಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಆದರೆ ಮೃತ ಮಹಿಳೆ ಯಾರು? ಕೊಲೆಗೆ ಕಾರಣವೇನು ಎನ್ನುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಈ ಘಟನೆ ದೆಹಲಿಯ ಶ್ರದ್ಧಾ ವಾಕರ್ ಪ್ರಕರಣದಂತೆ ಕಾಣಿಸುತ್ತಿದೆ. ಘಟನೆಗೆ ಕಾರಣ ಇನ್ನೂ ತಿಳಿದಿಲ್ಲವಾದರೂ ಮಹಿಳೆಯ ಮೃತ ದೇಹದ ತುಂಡುಗಳು ಗಮನಿಸಿದರೆ ಶ್ರದ್ಧಾ ವಾಕರ್ ಪ್ರಕರಣದಂತೆ ತೋರಿಕೆಗೆ ಕಾಣಿಸುತ್ತದೆ.
ಏನಿದು ಶ್ರದ್ಧಾ ಪ್ರಕರಣ?
ಮುಂಬೈ ಮೂಲದ ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಲಿವ್-ಇನ್ ಪಾಲುದಾರರಾಗಿದ್ದರು. ಇಬ್ಬರೂ ಮೇ 2022 ರಲ್ಲಿ ಮುಂಬೈನಿಂದ ದೆಹಲಿಯಲ್ಲಿ ವಾಸವಾಗಿದ್ದರು. ಆದರೆ ಇದಕ್ಕೆ ಇಬ್ಬರ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರು ಕುಟುಂಬದಿಂದ ದೂರ ಉಳಿದಿದ್ದರು. ಸುಮಾರು ಎರಡು ತಿಂಗಳಿನಿಂದ ಶ್ರದ್ಧಾ ವಾಕರ್ ತನ್ನೊಂದಿಗೆ ಮಾತನಾಡಿಲ್ಲ ಎಂದು ಶ್ರದ್ಧಾ ಸ್ನೇಹಿತೆಯೊಬ್ಬರು ತಂದೆಗೆ ತಿಳಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಶ್ರದ್ಧಾ ವಾಕರ್ ಅವರ ತಂದೆ ಕಳೆದ ಅಕ್ಟೋಬರ್ 2022 ರಲ್ಲಿ ತಮ್ಮ ಮಗಳನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಬೈ ಪೊಲೀಸರ ತನಿಖೆಯ ನಂತರ ಅವರು ದೆಹಲಿಗೆ ಸ್ಥಳಾಂತರಗೊಂಡಿರುವುದು ಬೆಳಕಿಗೆ ಬಂದಿದ್ದು, ಇಬ್ಬರೂ ದೆಹಲಿಯ ಛತ್ತರ್‌ಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿತ್ತು.
ಮಾಹಿತಿಯ ಜಾಡು ಹಿಡಿದು ಹೊರಟ ಪೊಲೀಸರು ಭಯಾನಕ ಸತ್ಯ ಬಹಿರಂಗಪಡಿಸಿದ್ದಾರೆ. ಅಫ್ತಾಬ್ ಪೂನಾವಾಲಾ ವಿಚಾರಣೆ ಮಾಡಿದಾಗ ಒಂದೊಂದೆ ಸತ್ಯ ಬಯಲಾಗಿದೆ. 18 ಮೇ 2022 ರಂದು ದೆಹಲಿಯಲ್ಲಿ ಆರೋಪಿ ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರಳಾದ ಶ್ರದ್ಧಾ ವಾಕರ್ ಅನ್ನು ಕತ್ತು ಹಿಸುಕಿ ಕೊಂದಿದ್ದನು.
ನಂತರ ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ದೆಹಲಿಯ ಮೆಹ್ರೌಲಿ ಮತ್ತು ಅದರ ಸುತ್ತಮುತ್ತಲಿನ ಅರಣ್ಯದಲ್ಲಿ ಎಸೆದಿದ್ದನು. ಶ್ರದ್ಧಾ ದೇಹವನ್ನು ಅಫ್ತಾಬ್ ಪೂನಾವಾಲಾ 35 ತುಣುಕುಗಳನ್ನು ಮಾಡಿದ್ದನು. ಆರಂಭದಲ್ಲಿ ಅವರು ಈ ತುಣುಕುಗಳನ್ನು 300 ಲೀಟರ್ ರೆಫ್ರಿಜರೇಟರ್ನಲ್ಲಿ ಇಟ್ಟು ಬಳಿಕ ಅರಣ್ಯದಲ್ಲಿ ಎಸೆದಿದ್ದನು. ಈ ಭಯಾನಕ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದಾದ ಬಳಿಕ ಹಲವಾರು ಪ್ರಕರಣಗಳು ಇದಕ್ಕೆ ಹೋಲುವಂತೆ ನಡೆದಿವೆ.












Click it and Unblock the Notifications