Amit Shah: ಪದೇ ಪದೇ ಭಯೋತ್ಪಾದಕ ದಾಳಿ; ಮಹತ್ವದ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ
ನವದೆಹಲಿ, ಜೂನ್. 16: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿಗೆ ಹಲವು ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಪದೇ ಪದೇ ಉಗ್ರರ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಗೃಹ ಸಚಿವ ಅಮಿತ್ ಶಾ ಹಲವು ಮಹತ್ವದ ಮಾರ್ಗಸೂಚಿಗಳನ್ನು ನೀಡಿದ್ದಾರೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ಮುಂದಿನ ದಿನಗಳಲ್ಲಿ ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ನಿರೀಕ್ಷೆಯಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಪರಿಸ್ಥಿತಿಯ ಕುರಿತು ಗೃಹ ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪ್ರಧಾನಿಯವರ ನಿರ್ದೇಶನದಂತೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನಾ ಮುಖ್ಯಸ್ಥರಾಗಿ ನಿಯೋಜಿತ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕ ತಪನ್ ದೇಕಾ, ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಮತ್ತು ಇತರ ಉನ್ನತ ಭದ್ರತಾ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಉಪಸ್ಥಿತರಿದ್ದರು.
ಅಮರನಾಥ ಯಾತ್ರೆಯ ಸಿದ್ಧತೆ ಪರಿಶೀಲನೆ
ಜೂನ್ 29 ರಂದು ಪ್ರಾರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಗೃಹ ಸಚಿವರು ಪರಿಶೀಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ, ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಪಡೆಗಳ ನಿಯೋಜನೆ, ಒಳನುಸುಳುವಿಕೆ ಪ್ರಯತ್ನಗಳು, ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಸ್ಥಿತಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ಸಂಚಿನ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಇತ್ತೀಚೆಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸಿನ ಮೇಲೆ ಉಗ್ರರ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಘಟನೆಗಳ ನಂತರ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಪ್ರಧಾನಿ ಮೋದಿ ಸಭೆ ನಡೆಸಿದ ಮೂರು ದಿನಗಳ ನಂತರ ಅಮಿತ್ ಶಾ ಇಲ್ಲಿ ನಾರ್ತ್ ಬ್ಲಾಕ್‌ನಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಳೆದ ವಾರದಲ್ಲಿ, ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ರಿಯಾಸಿ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಭಕ್ತರು ಹೋಗುತ್ತಿದ್ದ ಬಸ್ ಮೇಲೆ ದಾಳಿ ನಡೆಸಿ ಒಂಬತ್ತು ಮಂದಿಯನ್ನು ಕೊಂದಿದ್ದಾರೆ. ಒಬ್ಬ ಸಿಆರ್‌ಪಿಎಫ್ ಜವಾನ ಬಲಿಯಾಗಿದ್ದಾರೆ. ಏಳು ಭದ್ರತಾ ಸಿಬ್ಬಂದಿ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಶಂಕಿತ ಪಾಕಿಸ್ತಾನಿ ಭಯೋತ್ಪಾದಕರು ಸಹ ಬಲಿಯಾಗಿದ್ದಾರೆ. ಮೃತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications