5ನೇ ವಯಸ್ಸಿಗೆ ಮನೆ ಬಿಟ್ಟ ಬಾಲಕ, ಇಂದು 130ಕ್ಕೂ ಹೆಚ್ಚು ಯುವಜನರಿಗೆ ಬದುಕಿನ ದಾರಿ ತೋರಿಸಿದ ಉದ್ಯಮಿ!
ಐದನೇ ವರ್ಷದಲ್ಲಿ ಮನೆ ಬಿಟ್ಟು ಬೀದಿಪಾಲಾದ ಹುಡುಗ. ಸಾಮಾನ್ಯವಾಗಿ ಇಂಥ ಹುಡುಗರು ಸ್ಲಂ ಸೇರಿ ರೌಡಿಗಳಾಗಿ, ಪೊಲೀಸ್ ಸ್ಟೇಶನ್ ಸುತ್ತುವುದೋ ದಂಧೆ ಮಾಡುವುದೋ ಮಾಡುತ್ತಾರೆ. ಆದರೆ ಈತ ದೊಡ್ಡ ಕನಸು ಕಂಡ. ತನ್ನಂಥ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ಯಮ ಕಟ್ಟಿದ. ಮುಂಬೈನಲ್ಲಿ ಸಣ್ಣ ಕೆಫೆಯೊಂದನ್ನು ನಡೆಸುತ್ತಿರುವ ಅಮೀನ್ ಶೇಖ್ ಅವರ ಬದುಕಿನ ಕಥೆ ನಿಜಕ್ಕೂ ಸ್ಫೂರ್ತಿದಾಯಕ.
ಅಮೀನ್ ಶೇಖ್ ಅವರ ಕೆಫೆಯಲ್ಲಿ ಬಿಸಿಬಿಸಿ ಕಾಫಿ, ರುಚಿಕರವಾದ ಸ್ಯಾಂಡ್ವಿಚ್ಗಳು ಸಿಗುತ್ತವೆ. ಜೊತೆಗೆ, ಬೀದಿಗಳಲ್ಲಿ ಬೆಳೆದು ಬಂದ ಯುವಜನರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶವೂ ಸಿಗುತ್ತದೆ. ಕೆಲಸ ಕಲಿಯಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಮತ್ತು ತಾವು ಹುಟ್ಟಿದ ಪರಿಸ್ಥಿತಿಯನ್ನು ಮೀರಿ ಸಾಧನೆ ಮಾಡಲು ಈ ಕೆಫೆ ವೇದಿಕೆಯಾಗಿದೆ.

ಯಾರು ಈ Amin Sheikh?
ಮುಂಬೈನ ಅಂಧೇರಿ ಪ್ರದೇಶದಲ್ಲಿರುವ 'ಬಾಂಬೆ ಟು ಬಾರ್ಸಿಲೋನಾ ಲೈಬ್ರರಿ ಕೆಫೆ'ಯ ಸ್ಥಾಪಕರು ಅಮೀನ್ ಶೇಖ್. ಬಾಲ್ಯದಲ್ಲಿ ಅವರೇ ಮನೆ ಇಲ್ಲದೆ, ಹಿಂಸೆ ಮತ್ತು ಸಂಕಷ್ಟಗಳ ನಡುವೆ ಬದುಕು ಸಾಗಿಸಿದವರು. ಮನೆಯ ಭದ್ರತೆಯಿಲ್ಲದೆ ಬೆಳೆಯುವುದು ಎಷ್ಟು ಕಷ್ಟ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಆದರೆ, ಇಂದು ಅದೇ ಅನುಭವವನ್ನು ಇತರ ಮಕ್ಕಳ ಬದುಕಿನಲ್ಲಿ ಬದಲಾವಣೆ ತರಲು ಬಳಸಿಕೊಳ್ಳುತ್ತಿದ್ದಾರೆ.
ಅವರ ಕೆಫೆಯಲ್ಲಿ ಸುಮಾರು 15 ಯುವಜನರು ಕೆಲಸ ಮಾಡುತ್ತಿದ್ದಾರೆ. ಕೆಲವರು ಅಡುಗೆ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಕಾಫಿ ತಯಾರಿಸುವುದು, ಗ್ರಾಹಕರಿಗೆ ಆಹಾರ ಪೂರೈಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅವರಲ್ಲಿ ಹಲವರು ಬಾಲ್ಯದಲ್ಲಿ ಬೀದಿಗಳಲ್ಲಿ ಬದುಕಿದವರು ಅಥವಾ ಪೋಷಕರ ಆಸರೆಯಿಲ್ಲದೆ ಬೆಳೆದವರು. ಇಂದು ಈ ಕೆಫೆ ಅವರಿಗೆ ದುಡಿದು ಸಂಪಾದಿಸುವುದರ ಜೊತೆಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ.
ಅಮೀನ್ ಶೇಖ್ ಸಂಕಷ್ಟದ ಪಯಣ
ಅಮೀನ್ ಶೇಖ್ ಅವರ ಬಾಲ್ಯ ಕಣ್ಣೀರು ತರಿಸುವಂಥದ್ದು. ಸಾಮಾನ್ಯವಾಗಿ ಐದು ವರ್ಷದ ಮಕ್ಕಳು ಆಟವಾಡುತ್ತಾ, ಶಾಲೆಗೆ ಹೋಗುತ್ತಾ ಬಾಲ್ಯ ಕಳೆಯುತ್ತಾರೆ. ಆದರೆ, ಅಮೀನ್ಗೆ ಆ ವಯಸ್ಸಿನಲ್ಲೇ ಬದುಕಿನ ಕಠಿಣ ಮುಖ ಪರಿಚಯವಾಗಿತ್ತು. ಮನೆಯಲ್ಲಿನ ಹಿಂಸೆಯಿಂದ ಬೇಸತ್ತು ಐದು ವರ್ಷದವರಾಗಿದ್ದಾಗಲೇ ಅವರು ಮನೆಯಿಂದ ಓಡಿಹೋದರು. ಬಳಿಕ ಹಲವು ವರ್ಷಗಳ ಕಾಲ ಮುಂಬೈನ ಬೀದಿಗಳಲ್ಲಿ ಬದುಕು ಸಾಗಿಸಿದರು.
ತಮ್ಮ ಸ್ವಯಂಪ್ರಕಟಿತ 'ಬಾಂಬೆ ಮುಂಬೈ: ಲೈಫ್ ಈಸ್ ಲೈಫ್, ಐ ಆ್ಯಮ್ ಬಿಕಾಸ್ ಆಫ್ ಯು' ಎಂಬ ಪುಸ್ತಕದಲ್ಲಿ ಅವರು ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಿದ್ದಾರೆ. ಅದರ ಪ್ರಕಾರ, ಎಂಟು ವರ್ಷದವರಾಗಿದ್ದಾಗ ಕ್ಯಾಥೋಲಿಕ್ ಧರ್ಮದ ಸನ್ಯಾಸಿನಿಯೊಬ್ಬರು ಅವರನ್ನು ರಕ್ಷಿಸಿದರು. ನಂತರ ಅವರು ಜೆಸ್ಯೂಟ್ ಅನಾಥಾಶ್ರಮದಲ್ಲಿ ಬೆಳೆದರು.
ಬಾಲ್ಯದಲ್ಲಿ ಪ್ರೀತಿ, ಭದ್ರತೆ ಮತ್ತು ನೆಮ್ಮದಿಗಾಗಿ ಹಂಬಲಿಸಿದ್ದ ಅಮೀನ್, ಮುಂದೆ ಇತರ ಮಕ್ಕಳಿಗೆ ಅಂಥದ್ದೇ ಬದುಕನ್ನು ಒದಗಿಸಬೇಕು ಎಂಬ ಆಶಯ ಬೆಳೆಸಿಕೊಂಡರು.
ಬದುಕನ್ನೇ ಬದಲಿಸಿದ ಬಾರ್ಸಿಲೋನಾ ಪ್ರವಾಸ
ಇಪ್ಪತ್ತರ ಹರೆಯದಲ್ಲಿ ಅಮೀನ್ ಒಬ್ಬ ಉದ್ಯೋಗದಾತರ ಬಳಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ಉದ್ಯೋಗದಾತರ ನೆರವಿನಿಂದ 2003ರಲ್ಲಿ ಸ್ಪೇನ್ನ ಬಾರ್ಸಿಲೋನಾ ನಗರಕ್ಕೆ ಪ್ರಯಾಣಿಸುವ ಅವಕಾಶ ಸಿಕ್ಕಿತು.
ಅಲ್ಲಿ ಅವರು ಗಮನಿಸಿದ ಒಂದು ಸಂಗತಿ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಅಲ್ಲಿನ ಕೆಫೆ ಮತ್ತು ರೆಸ್ಟೋರೆಂಟ್ಗಳಿಗೆ ಹೋದಾಗ ಅವರನ್ನು ಇತರ ಗ್ರಾಹಕರಂತೆಯೇ ಸ್ವಾಗತಿಸಲಾಗುತ್ತಿತ್ತು. ಎಲ್ಲರೊಂದಿಗೆ ಒಂದೇ ಮೇಜಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತಿತ್ತು.
ಆದರೆ, ಭಾರತದಲ್ಲಿ ಚಾಲಕರು ತಮ್ಮ ಮಾಲೀಕರು ಊಟ ಮಾಡುವಾಗ ಹೊರಗೆ ಕಾಯಬೇಕೆಂಬ ನಿರೀಕ್ಷೆ ಸಾಮಾನ್ಯವಾಗಿತ್ತು. ಈ ಎರಡು ಅನುಭವಗಳ ನಡುವಿನ ವ್ಯತ್ಯಾಸ ಅಮೀನ್ ಅವರನ್ನು ಆಲೋಚನೆಗೆ ಹಚ್ಚಿತು.
ವ್ಯಕ್ತಿಯ ಉದ್ಯೋಗ (jobs) ಅಥವಾ ಸಾಮಾಜಿಕ ಸ್ಥಾನಮಾನ ಏನೇ ಇರಲಿ, ಆತನಿಗೆ ಗೌರವ ಸಿಗಬೇಕು ಎಂಬ ವಿಚಾರ ಅವರಿಗೆ ಮಹತ್ವದ್ದಾಗಿ ಕಂಡಿತು. ಎಲ್ಲ ವರ್ಗದ ಜನರೂ ಯಾವುದೇ ಭೇದಭಾವವಿಲ್ಲದೆ ಒಟ್ಟಿಗೆ ಕುಳಿತು ಊಟ ಮಾಡುವಂಥ ಕೆಫೆಯೊಂದನ್ನು ಆರಂಭಿಸಬೇಕೆಂಬ ಆಲೋಚನೆ ಅವರಲ್ಲಿ ಮೊಳಕೆಯೊಡೆಯಿತು. ಆ ಆಲೋಚನೆಯೇ ಮುಂದೆ 'ಬಾಂಬೆ ಟು ಬಾರ್ಸಿಲೋನಾ ಲೈಬ್ರರಿ ಕೆಫೆ'ಯ ರೂಪ ಪಡೆದುಕೊಂಡಿತು.
ಕಾಫಿ ಮಾತ್ರವಲ್ಲ, ಬದುಕಿಗೂ ಹೊಸ ರುಚಿ!
ಕೆಫೆಯ ಪ್ರವೇಶದ್ವಾರದ ಮೇಲಿರುವ ಫಲಕದಲ್ಲಿ 'ಬೀದಿಗಳಲ್ಲಿ ಬೆಳೆದ ಹುಡುಗಿಯರು ಮತ್ತು ಹುಡುಗರು ನಡೆಸುವ ಕೆಫೆ' ಎಂಬ ಅರ್ಥ ನೀಡುವ ಬರಹವಿದೆ. ಒಳಗೆ ಹೋದರೆ ಮೇಜುಗಳ ಪಕ್ಕದಲ್ಲಿ ಪುಸ್ತಕಗಳು (books) ಕಾಣಿಸುತ್ತವೆ. ಕೆಲವರು ಕಾಫಿ ಕುಡಿಯುತ್ತಾ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಾರೆ. ಸ್ನೇಹಿತರು ಹರಟೆ ಹೊಡೆಯುತ್ತಾರೆ. ಮತ್ತೆ ಕೆಲವರು ಈ ವಿಶಿಷ್ಟ ಕೆಫೆಯ ಹಿಂದಿರುವ ಕಥೆಯನ್ನು ತಿಳಿದುಕೊಳ್ಳಲು ಬರುತ್ತಾರೆ.
ಇದು ಕೇವಲ ವ್ಯಾಪಾರದ ಉದ್ದೇಶದಿಂದ ಆರಂಭವಾದ ಕೆಫೆಯಲ್ಲ. ಹಣದ ಕೊರತೆಯಿಂದ ಆಹಾರ ಖರೀದಿಸಲು ಸಾಧ್ಯವಾಗದವರಿಗೂ ಇಲ್ಲಿ ನೆರವು ಸಿಗುತ್ತದೆ. ಕೆಲವು ಆಹಾರ ಮತ್ತು ಪಾನೀಯಗಳನ್ನು ಕಡಿಮೆ ಬೆಲೆಗೆ ನೀಡುವ ವ್ಯವಸ್ಥೆಯೂ ಇದೆ. ಸುತ್ತಮುತ್ತಲಿನ ನಿರ್ಗತಿಕ ಮಕ್ಕಳು ಆಹಾರದ ಬದಲಿಗೆ ಆಹಾರ ನೀಡುವ ವಿನಿಮಯ ವ್ಯವಸ್ಥೆಯ ಪ್ರಯೋಜನ ಪಡೆಯುತ್ತಾರೆ.
ಕೆಫೆಯಲ್ಲಿ ಕೆಲಸ ಮಾಡುವ ಯುವಜನರಿಗೆ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಿಕೊಡಲು ಸಹ ನೆರವು ನೀಡಲಾಗುತ್ತದೆ. ಇದರಿಂದ ಬೀದಿಗಳಲ್ಲಿ ಅಥವಾ ಅಸ್ಥಿರ ಪರಿಸ್ಥಿತಿಗಳಲ್ಲಿ ಬದುಕಿದ್ದವರಿಗೆ ಸುರಕ್ಷಿತವಾದ ವಾಸಸ್ಥಳದಲ್ಲಿ ನೆಲೆ ಕಂಡುಕೊಳ್ಳುವ ಅವಕಾಶ ಸಿಗುತ್ತದೆ. ಹೀಗೆ ಈ ಕೆಫೆ ಹಲವರಿಗೆ ಹೊಟ್ಟೆ ತುಂಬಿಸುವ ಸ್ಥಳ ಮಾತ್ರವಲ್ಲ, ನೆಮ್ಮದಿಯ ಬದುಕಿನ ಆರಂಭವೂ ಆಗಿದೆ.
ಆತ್ಮವಿಶ್ವಾಸವೇ ಬದುಕಿನ ತಿರುವು
ಈ ಕೆಫೆಯಿಂದ ಬದುಕು ಬದಲಿಸಿಕೊಂಡವರಲ್ಲಿ ಖುಷ್ಬೂ ಅಲಿ ಕೂಡ ಒಬ್ಬರು. ಅವರು ಕೆಫೆಯ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಒಂದು ಕಾಲದಲ್ಲಿ ಅಪರಿಚಿತರೊಂದಿಗೆ ಮಾತನಾಡಬೇಕೆಂದರೆ ಖುಷ್ಬೂಗೆ ಭಯವಾಗುತ್ತಿತ್ತು. ಮಾತನಾಡುವ ಸಂದರ್ಭ ಬಂದರೆ ಅಳುತ್ತಿದ್ದ ದಿನಗಳೂ ಇದ್ದವು. ಆದರೆ, ಅಮೀನ್ ಶೇಖ್ ಅವರ ಪ್ರೋತ್ಸಾಹದಿಂದ ಅವರು ನಿಧಾನವಾಗಿ ತಮ್ಮ ಮೇಲೆಯೇ ನಂಬಿಕೆ ಬೆಳೆಸಿಕೊಂಡರು.
ಇಂದು ಕೆಫೆಯ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವಷ್ಟು ಆತ್ಮವಿಶ್ವಾಸ ಅವರಲ್ಲಿ ಬೆಳೆದಿದೆ. ಅಷ್ಟೇ ಅಲ್ಲ, ಫ್ಯಾಷನ್ ವಿನ್ಯಾಸದ ಮೇಲಿದ್ದ ಆಸಕ್ತಿಯನ್ನೂ ಮುಂದುವರಿಸಿದ್ದಾರೆ. ಅವರು ತಯಾರಿಸಿದ ವಿನ್ಯಾಸದ ಉಡುಪುಗಳನ್ನು ಕೆಫೆಯಲ್ಲಿ ಪ್ರದರ್ಶಿಸಲಾಗುತ್ತದೆ. ಆಸಕ್ತರು ಅವುಗಳನ್ನು ಖರೀದಿಸಲೂಬಹುದು.
ಅವರಿಗೆ ದೊರೆತ ಅವಕಾಶಗಳು ಕೆಫೆಯನ್ನೂ ಮೀರಿ ವಿಸ್ತರಿಸಿವೆ. ಮಾಲ್ಟಾ ಮೂಲದ ಫ್ಯಾಷನ್ ಬ್ರ್ಯಾಂಡ್ 'ಚಾರ್ಲ್ಸ್ ಆ್ಯಂಡ್ ರಾನ್' ಜೊತೆಗಿನ ವ್ಯವಸ್ಥೆಯ ಮೂಲಕ ಖುಷ್ಬೂಗೆ ಮೂರು ತಿಂಗಳ ಇಂಟರ್ನ್ಶಿಪ್ ಮಾಡುವ ಅವಕಾಶ ದೊರೆಯಿತು. ಕೆಫೆಯ ಮತ್ತೊಬ್ಬ ಉದ್ಯೋಗಿ ಜ್ಯೋತಿ ಯಾದವ್ ಅವರಿಗೆ ಆ ಬ್ರ್ಯಾಂಡ್ನ ಉಡುಪುಗಳನ್ನು ಧರಿಸಿ ಮಾಡೆಲಿಂಗ್ ಮಾಡುವ ಅವಕಾಶ ಸಿಕ್ಕಿತು.
ಇನ್ನು, ಹಿಂದೆ ಕೆಫೆಯಲ್ಲಿ ಕಾಫಿ ತಯಾರಕರಾಗಿ ಕೆಲಸ ಮಾಡುತ್ತಿದ್ದ ಸೈರಾಜ್ ಬಾಬು ಮೆಥಾರಿ ಅವರು ರ್ಯಾಪ್ ಸಂಗೀತ ಮತ್ತು ಬರವಣಿಗೆಯಲ್ಲಿ ತಮ್ಮ ಆಸಕ್ತಿಯನ್ನು ಮುಂದುವರಿಸಿದ್ದಾರೆ.
130ಕ್ಕೂ ಹೆಚ್ಚು ಯುವಜನರಿಗೆ ತರಬೇತಿ
ಅಮೀನ್ ಶೇಖ್ ಅವರ ಕೆಫೆ ಈವರೆಗೆ 130ಕ್ಕೂ ಹೆಚ್ಚು ಯುವಜನರಿಗೆ ಕೆಫೆಯಲ್ಲಿ ಕೆಲಸ ಮಾಡುವ ಕೌಶಲಗಳನ್ನು ಕಲಿಸಲು ನೆರವಾಗಿದೆ ಎಂದು ವರದಿಗಳು ತಿಳಿಸಿವೆ. ಕೆಲಸ ಕಲಿಸುವುದರ ಜೊತೆಗೆ ಸ್ವತಂತ್ರವಾಗಿ ಬದುಕಲು ಬೇಕಾದ ಆತ್ಮವಿಶ್ವಾಸವನ್ನೂ ಬೆಳೆಸಲು ಪ್ರಯತ್ನಿಸಲಾಗಿದೆ.
ಅವರ ನೆರವಿನಿಂದ ಕೆಫೆಯ ಮಾಜಿ ಸಾರ್ವಜನಿಕ ಸಂಪರ್ಕ ತಂಡದ ಸದಸ್ಯೆ ಅಲುಮೇಲು ಬಹದ್ದೂರ್ ಅವರು ಕಡಿಮೆ ಆದಾಯದ ಕುಟುಂಬಗಳ ಮಕ್ಕಳಿಗಾಗಿ ಶಾಲೆ ಆರಂಭಿಸುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಯಿತು. ಇಬ್ಬರೂ ಸೇರಿ 'ಲಿಟಲ್ ಗುರುಸ್ ನೆಸ್ಟ್' ಎಂಬ ಆರಂಭಿಕ ಕಲಿಕಾ ಕೇಂದ್ರವನ್ನು ಸ್ಥಾಪಿಸಿದರು. ಇದು 2023ರ ಜನವರಿಯಲ್ಲಿ ಆರಂಭವಾಯಿತು.
ಹಿಂದೆ ಮಾಂಸದ ಅಂಗಡಿಯಾಗಿದ್ದ ಸ್ಥಳವನ್ನು ಮಕ್ಕಳ ಕಲಿಕಾ ಕೇಂದ್ರವಾಗಿ ಪರಿವರ್ತಿಸಲಾಯಿತು. ಐದು ವರ್ಷದೊಳಗಿನ ಮಕ್ಕಳಿಗಾಗಿ ಮಾಂಟೆಸ್ಸರಿ ಮತ್ತು ವಾಲ್ಡಾರ್ಫ್ ಶಿಕ್ಷಣ ಪದ್ಧತಿಗಳನ್ನು ಆಧರಿಸಿದ ಕಲಿಕಾ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಈ ಕೇಂದ್ರದಲ್ಲಿ ದಾಖಲಾಗಿರುವ 29 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಭಾಷೆ, ಗಣಿತ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.
ಸಮಾಜಮುಖಿ ಕೆಲಸಕ್ಕೆ ಹೊಸ ವೇದಿಕೆ
2024ರಲ್ಲಿ ಅಮೀನ್ ಶೇಖ್ ಅವರು 'ಸ್ಟ್ರೀಟ್ ಏಂಜಲ್ಸ್ ಫೌಂಡೇಶನ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಶಾಲೆಯಂತಹ ಯೋಜನೆಗಳಿಗೆ ದೇಣಿಗೆ ಸಂಗ್ರಹಿಸುವುದು ಇದರ ಉದ್ದೇಶ. ವಸತಿ ಸೌಲಭ್ಯ ಕಲ್ಪಿಸುವ ಪ್ರಯತ್ನಗಳಿಗೂ ಈ ಸಂಸ್ಥೆ ನೆರವು ನೀಡಿದೆ.


Click it and Unblock the Notifications
