Kedarnath: ಕೇದಾರನಾಥ ದೇಗುಲದಲ್ಲಿ ಚಿನ್ನ ಕಳುವು ಆರೋಪ: ದೇವಾಲಯದ ಟ್ರಸ್ಟ್‌ನಿಂದ ಶಂಕರಾಚಾರ್ಯರಿಗೆ ಸವಾಲ್!
ಡೆಹ್ರಾಡೂನ್ ಜುಲೈ 17: ಕೇದಾರನಾಥ ಧಾಮದಲ್ಲಿ ಚಿನ್ನ ಕಣ್ಮರೆಯಾಗಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಹೇಳಿಕೆ ಸಂಚಲನ ಮೂಡಿಸಿದೆ. ಕೇದಾರನಾಥ ದೇಗುಲದಿಂದ 228 ಕಿಲೋಗ್ರಾಂ ಚಿನ್ನ ಕಳ್ಳತನವಾಗಿದೆ ಎಂದು ಸ್ವಾಮಿಜಿಯವರು ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಬುಧವಾರ ಪ್ರತಿಕ್ರಿಯಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ್ ಅವರು, ಶಂಕರಾಚಾರ್ಯರು ವಾಸ್ತವಾಂಶವನ್ನು ಮಂಡಿಸಬೇಕು. ಅವರ ಹೇಳಿಕೆಯನ್ನು ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇದಾರನಾಥ ಧಾಮದಲ್ಲಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ನೀಡಿರುವ ಹೇಳಿಕೆ ಅತ್ಯಂತ ಕಳವಳಕಾರಿಯಾಗಿದೆ. ನಾನು ಅವರಿಗೆ ಮನವಿ ಮಾಡಲು ಬಯಸುತ್ತೇನೆ ಮತ್ತು ಸತ್ಯವನ್ನು ಹೊರತರುವಂತೆ ಸವಾಲು ಹಾಕುತ್ತೇನೆ ಎಂದು ಅಜಯ್ ಹೇಳಿದ್ದಾರೆ.
ಸ್ವಾಮಿ ಅವಿಮುಕ್ತೇಶ್ವರಾನಂದರು ಹೇಳಿಕೆಗಳನ್ನು ನೀಡುವ ಬದಲು ಪ್ರಾಧಿಕಾರವನ್ನು ಸಂಪರ್ಕಿಸಿ ತನಿಖೆಗೆ ಒತ್ತಾಯಿಸಬೇಕು ಅಥವಾ ಸಾಕ್ಷ್ಯಾಧಾರಗಳಿದ್ದರೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು ಎಂದು ಅಜೇಂದ್ರ ಅಜಯ್ ಹೇಳಿದ್ದಾರೆ.

ಅವರಿಗೆ ಪ್ರಾಧಿಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ, ಅವರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ಗೆ ಹೋಗಬಹುದು. ಅರ್ಜಿ ಸಲ್ಲಿಸಬಹುದು. ಅವರ ಬಳಿ ಸಾಕ್ಷ್ಯವಿದ್ದರೆ ತನಿಖೆಗೆ ಕೇಳುಹಿಸಲಿ ಎಂದು ಅಜಯ್ ತಿಳಿಸಿದ್ದಾರೆ.
ಕೇದಾರನಾಥ ಧಾಮದ ಘನತೆಗೆ ಧಕ್ಕೆ ತರುವ ಹಕ್ಕು ಶಂಕರಾಚಾರ್ಯರಿಗೆ ಇಲ್ಲ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದರು ರಾಜಕೀಯ ಅಜೆಂಡಾವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದರೆ ಅದು ಅತ್ಯಂತ ದುರದೃಷ್ಟಕರ ಎಂದು ಅವರು ಕಿಡಿ ಕಾರಿದರು.
ಕೇದಾರನಾಥ ಧಾಮದ ಘನತೆಗೆ ಧಕ್ಕೆ ತರುವ ಅಥವಾ ವಿವಾದ ಸೃಷ್ಟಿಸುವ ಹಕ್ಕು ಅವರಿಗೆ ಇಲ್ಲ. ಕೇವಲ ಪ್ರತಿಭಟಿಸಲು, ವಿವಾದಗಳನ್ನು ಸೃಷ್ಟಿಸಲು ಮತ್ತು ಕಾಂಗ್ರೆಸ್‌ನ ಅಜೆಂಡಾವನ್ನು ಮತ್ತಷ್ಟು ಹೆಚ್ಚಿಸಲು ಅವರು ಈ ರೀತಿ ಮಾಡುತ್ತಿದ್ದರೆ, ಅದಕ್ಕೆ ನಾವು ಉತ್ತರಿಸಲು ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಏನಿದು ಘಟನೆ?
ಜುಲೈ 15 ಸೋಮವಾರ ಸ್ವಾಮಿ ಅವಿಮುಕ್ತೇಶ್ವರಾನಂದರು ಕೇದಾರನಾಥದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಿದ್ದರು.
"ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದ ಬಗ್ಗೆ ಇವರು ಏಕೆ ಚಕಾರ ಎತ್ತುತ್ತಿಲ್ಲ? ಅಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣ ಮಾಡಲು ಹೊರಟಿದ್ದಾರೆ. ಅಲ್ಲಿಯೂ ಮತ್ತೊಂದು ಹಗರಣ ನಡೆಯಲಿದೆ. ಕೇದಾರನಾಥದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ; ಯಾವುದೇ ವಿಚಾರಣೆ ನಡೆಸಿಲ್ಲ. ಇದಕ್ಕೆ ಯಾರು ಹೊಣೆ?" ಸ್ವಾಮಿ ಅವಿಮುಕ್ತೇಶ್ವರಾನಂದರು ಪ್ರಶ್ನೆ ಮಾಡಿದ್ದರು.
ಈ ವಿಷಯದ ಬಗ್ಗೆ ತನಿಖೆಗಾಗಿ ಕಮಿಷನರ್‌ಗೆ ಒತ್ತಾಯಿಸಲಾಯಿತು. ಆದರೆ ಅವರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲಿಲ್ಲ ಎಂದು ಶಂಕರಾಚಾರ್ಯರು ಹೇಳಿದ್ದಾರೆ.
"ಈ ಹಿಂದೆ 320 ಕೆಜಿ ಚಿನ್ನ ಕಾಣೆಯಾಗಿದೆ ಎಂದು ಹೇಳಲಾಗುತ್ತಿತ್ತು, ನಂತರ ಅದು 228 ಕ್ಕೆ ಇಳಿದಿದೆ, ನಂತರ ಅದು ಏಕಕಾಲದಲ್ಲಿ 36, 32 ಮತ್ತು 27 ಆಯಿತು. ಸಂಖ್ಯೆ 320, 228, 36, 32, ಅಥವಾ 27 ಆಗಿರಲಿ, ಇಲ್ಲಿ ಸಮಸ್ಯೆ ಅಂದರೆ ಚಿನ್ನಾಭರಣ ಎಲ್ಲಿ ಹೋಯಿತು ಅನ್ನೋದು. ಅದನ್ನು ತನಿಖೆ ಮಾಡಬೇಕು" ಎಂದು ಸ್ವಾಮಿ ಅವಿಮುಕ್ತೇಶ್ವರಾನಂದರು ಹೇಳಿದರು.












Click it and Unblock the Notifications