'ಅಜಿತ್ ದೋವಲ್, ಜೈಶೆ ಉಗ್ರ ಮಸೂದ್ ಅಜರ್ ಜೊತೆ ಪ್ರಯಾಣಿಸಿಲ್ಲ'
ನವದೆಹಲಿ, ಮಾರ್ಚ್ 12: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜೈಶೆ-ಎ-ಮೊಹಮ್ಮದ್ ಉಗ್ರರ ಮುಖಂಡ ಅಜರ್ ಮಸೂದ್‌ನ ಜೊತೆಗೆ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂದು ರಾಹುಲ್ ಗಾಂಧಿ ಹೇಳಿರುವುದನ್ನು ಭದ್ರತಾ ಇಲಾಖೆಯು ನಿರಾಕರಿಸಿದೆ.
1999 ರಲ್ಲಿ ಉಗ್ರರು ವಿಮಾನ ಅಪಹರಣ ಮಾಡಿ ಮಸೂದ್ ಅಜರ್‌ನ ಬಿಡುಗಡೆಗೆ ಒತ್ತಾಯಿಸಿದಾಗ ಆತನನ್ನು ಭಾರತವು ಕಂದಹಾರ್‌ಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿತ್ತು. ಆದರೆ ಅಂದು ಮಸೂದ್ ಅಜರ್‌ನನ್ನು ಕರೆದೊಯ್ದ ವಿಮಾನದಲ್ಲಿ ದೊವಲ್ ಇರಲಿಲ್ಲ ಎಂದು ಭದ್ರತಾ ಇಲಾಖೆಯು ಉನ್ನತ ಅಧಿಕಾರಿ ಹೇಳಿದ್ದಾರೆ.
ಮಸೂದ್ ಅಜರ್‌ನ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಜಿತ್ ದೋವಲ್, ಆತನೇ ಉಗ್ರರೊಂದಿಗೆ ಮತನಾಡಿ ಡೀಲ್ ಕುದುರಿಸಿದ್ದು, ಮಸೂದ್ ಅಜರ್‌ನೊಂದಿಗೆ ವಿಮಾನದಲ್ಲಿ ಹೋಗಿ ಆತನನ್ನು ಉಗ್ರರಿಗೆ ಹಸ್ತಾಂತರ ಮಾಡಿಬಂದದ್ದು ದೋವಲ್ ಎಬುದನ್ನು ಮೋದಿ ಅವರು ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹೇಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಗಾಂಧಿ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ತಮ್ಮ ಹೇಳಿಕೆಗೆ ಪೂರಕವಾಗಿ ರಾಹುಲ್ ಅವರು ಎರಡು ಚಿತ್ರಗಳನ್ನು ಸಹ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.
ಆದರೆ ರಾಹುಲ್ ಅವರ ಹೇಳಿಕೆಯನ್ನು ಭದ್ರತಾ ಇಲಾಖೆ ತಳ್ಳಿ ಹಾಕಿದ್ದು, ಮಸೂದ್ ಅಜರ್‌ನ ಬಿಡುಗಡೆ ದಿನ, ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ಅಜರ್ ಮಸೂದ್ ಮತ್ತು ಇನ್ನಿಬ್ಬರು ಉಗ್ರರು ಇದ್ದ ವಿಮಾನದಲ್ಲಿ ಕಂದಹಾರ್‌ಗೆ ತೆರಳಿದರು. ಅಜಿತ್ ದೋವಲ್ ಮೊದಲೇ ಕಂದಹಾರ್‌ಗೆ ತೆರಳಿ ಅಲ್ಲಿ ವಿಮಾನ ಅಪಹರಣಕಾರ ಮನವೊಲಿಸುವ ಯತ್ನಗಳನ್ನು ಮಾಡುತ್ತಿದ್ದರು ಎಂದು ಹೇಳಿದೆ.












Click it and Unblock the Notifications