"ನಿಜವಾದ ಭಾರತೀಯ ನಾರಿ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ!"
ಅಗರ್ತಲ, ಏಪ್ರಿಲ್ 27: ಇತ್ತೀಚೆಗೆ ತಾನೇ 'ಮಹಾಭಾರತ ಕಾಲದಿಂದಲೇ ಅಂತರ್ಜಾಲ ಸೌಲಭ್ಯವಿತ್ತು' ಎನ್ನುವ ಮೂಲಕ ವಿವಾದಾಸ್ಪದ ಹೇಳಿಕೆ ನೀಡಿದ್ದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್ ಇದೀಗ ಮತ್ತೊಂದು ಅಂಥದೇ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
"ನಿಜವಾದ ಭಾರತೀಯ ನಾರಿ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ!" ಎಂದು ಅವರು ಹೇಳಿದ್ದಾರೆ. ಭಾರತೀಯ ಮಹಿಳೆಯರು ಸೌಂದರ್ಯ ಪ್ರಸಾಧನಗಳನ್ನು ಉಪಯೋಗಿಸುತ್ತಿರಲಿಲ್ಲ. ಶಾಂಪೂ ಬಳಸುತ್ತಿರಲಿಲ್ಲ, ಸೌಂದರ್ಯ ಪರಿಕರಗಳು ಅಂತಾರಾಷ್ಟ್ರೀಯ ಮಾಫಿಯಾ. ಅವಕ್ಕೆ ನಮ್ಮ ದೇಶದಲ್ಲಿ ಸಾಕಷ್ಟು ಮಾರುಕಟ್ಟೆ ಇದೆ. ದೇಶದ ಎಲ್ಲೆಡೆಯೂ ಈಗೀಗ ಬ್ಯೂಟಿ ಪಾರ್ಲರ್ ಗಳು ಕಾಣಿಸುತ್ತವೆ. ಆದರೆ ಇವುಗಳಿಂದ ಸಿಗುವ ಸೌಂದರ್ಯ ನಿಜವಾದ ಸೌಂದರ್ಯವಲ್ಲ" ಎಂದು ಅವರು ಹೇಳಿದ್ದಾರೆ.
ಸೌಂದರ್ಯ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಜವಳಿ ಕಂಪನಿಗಳೂ ಕೈಯಾಡಿಸುತ್ತವೆ ಎಂದಿರುವುದಲ್ಲದೆ, ನನಗೆ ಸೌಂದರ್ಯ ಸ್ಪರ್ಧೆಯ ತೀರ್ಪನ್ನು ಯಾವ ರೀತಿ ನೀಡುತ್ತಾರೆ ಎಂಬುದೇ ಅರ್ಥವಾಗಿಲ್ಲ ಎಂದಿದ್ದಾರೆ.

"1997 ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿದ ಡಯಾನಾ ಹೆಡನ್ ಗೆ ಈ ಪ್ರಶಸ್ತಿ ಸಿಕ್ಕಿದ್ದು ಹೇಗೆ. 1994 ಗೆದ್ದ ಐಶ್ವರ್ಯ ರೈ ಗೆ ಈ ಕಿರೀಟ ತೊಡಿಸಿದ್ದರಲ್ಲಿ ಅರ್ಥವಿದೆ. ಭಾರತೀಯ ನಾರಿ ಲಕ್ಷ್ಮಿ, ಸರಸ್ವತಿಯರನ್ನು ಪ್ರತಿನಿಧಿಸುತ್ತಾಳೆ. ಐಶ್ವರ್ಯ ರೈ ಸಹ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುತ್ತಾಳೆ. ಆದರೆ ಡಯಾನಾ ಹೆಡನ್ ಗೆ ಈ ಪ್ರಶಸ್ತಿ ಸಿಕ್ಕಿದ್ದು ಹೇಗೆ?" ಎಂದು ಅವರು ಪ್ರಶ್ನಿಸಿದ್ದಾರೆ.
ವಿನಾಕಾರಣ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಬೇಡಿ, ಮಾಧ್ಯಮದೆದುರು ಜಾಗರೂಕರಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮರುದಿನವೇ ದೇವ್ ನೀಡಿದ ಈ ಹೇಳಿಕೆ ವಿವಾದ ಸೃಷ್ಟಿಸಿದೆ.












Click it and Unblock the Notifications