ದಿಗ್ವಿಜಯ್ ಸಿಂಗ್ 2ನೇ ಮದುವೆಗೆ ಸ್ವಾಮೀಜಿಯ ಕೊಕ್ಕೆ?
ನವದೆಹಲಿ, ಮೇ 14: ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಎರಡನೇ ಮದುವೆಯ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆ ಕಮ್ಮಿ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ದಿಗ್ವಿಜಯ್ ಸಿಂಗ್ ಅವರಿಗೆ ಆಶೀರ್ವಾದ ಮಾಡಲು ಅವರ ಗುರುಗಳು ಒಪ್ಪದೇ ಇರುವುದು ಡಿಗ್ಗಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.
ಪತ್ರಕರ್ತೆ ಅಮೃತಾ ರಾಯ್ ಜೊತೆ ಎರಡನೇ ಮದುವೆಯಾಗಲು ಮುಂದಾಗಿರುವ ದಿಗ್ವಿಜಯ್ ತನ್ನ ಆಧ್ಯಾತ್ಮಿಕ ಗುರು ಸ್ವಾಮಿ ಸ್ವರೂಪಾನಂದ ಸರಸ್ವತಿ ಗುರುಗಳ ಆಶೀರ್ವಾದ ಪಡೆಯಲು ಅವರ ಆಶ್ರಮಕ್ಕೆ ತೆರಳಿದ್ದರು. ಆದರೆ ದಿಗ್ವಿಜಯ್ ಅವರ ಎರಡನೇ ಮದುವೆಗೆ ಆಶೀರ್ವದಿಸಲು ಸ್ವರೂಪಾನಂದ ಗುರುಗಳು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ಜನಪ್ರತಿನಿಧಿಗಳು ಸಾರ್ವಜನಿಕ ಹಿತಕ್ಕೆ ವಿರುದ್ದವಾಗಿರುವ ವಿಷಯಗಳಿಗೆ ನಾನು ಎಂದೂ ಆಶೀರ್ವದಿಸುವುದಿಲ್ಲ. ಅದು ದಿಗ್ವಿಜಯ್ ಸಿಂಗ್ ಆಗಲಿ ಅಥವಾ ಜನಸಾಮಾನ್ಯರೇ ಆಗಿರಲಿ ಎಂದು ಗುರುಗುಳು ಖಡಕ್ಕಾಗಿ ಶಿಷ್ಯನಿಗೆ ಹೇಳಿ ಕಳುಹಿಸಿದ್ದಾರೆಂದು ಜೀ ನ್ಯೂಸ್ ವರದಿ ಮಾಡಿದೆ. (ಡಿಗ್ಗಿ ಮದುವೆ ಘೋಷಣೆ)

ಕೆಲವು ದಿನಗಳ ಹಿಂದೆ ಸ್ವರೂಪಾನಂದ ಗುರುಗಳ ಪರಮಹಂಸಿ ಗಂಗಾ ಆಶ್ರಮದಲ್ಲಿ ದಿಗ್ವಿಜಯ್ ಸಿಂಗ್ ಗುರುಗಳನ್ನು ಭೇಟಿ ಮಾಡಿದ್ದರು. ಇಪ್ಪತ್ತು ನಿಮಿಷಗಳ ಕಾಲ ಗುರುಗಳ ಬಳಿ ಮಾತುಕತೆ ನಡೆಸಿದ ದಿಗ್ವಿಜಯ್ ಸಿಂಗ್, ತನ್ನ ಎರಡನೇ ಮದುವೆ ವಿಚಾರವನ್ನು ಪ್ರಸ್ತಾಪಿಸಿ ಆಶೀರ್ವದಿಸುವಂತೆ ಕೇಳಿಕೊಂಡಿರಂತೆ. ಆದರೆ, ಗುರುಗಳು ಆಶೀರ್ವದಿಸಲು ಸುತರಾಂ ಒಪ್ಪಲಿಲ್ಲ ಎಂದು ಸ್ಥಳೀಯ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಜೀನ್ಯೂಸ್ ವರದಿ ಮಾಡಿದೆ.
ಅತ್ತ ಗುರುವನ್ನೂ ಬಿಡಲಾಗದೇ ಇತ್ತ ಪ್ರೇಯಸಿಯನ್ನೂ ಬಿಡಲಾಗದೇ ಅಡಕತ್ತರಿಯಲ್ಲಿ ಸಿಲುಕಿರುವ ಅರವತ್ತೇಳರ ದಿಗ್ವಿಜಯ್ ಸಿಂಗ್, ಎಪ್ರಿಲ್ ಮೂವತ್ತರಂದು ಅಮೃತಾ ರಾಯ್ ಜೊತೆಗಿನ ತನಗಿರುವ ಸಂಬಂಧವನ್ನು ಬಹಿರಂಗ ಪಡಿಸಿದ್ದರು.
40 ಪ್ಲಸ್ ವಯಸ್ಸಿನ ಟಿವಿ ನಿರೂಪಕಿ ಕಂ ಪತ್ರಕರ್ತೆ ಅಮೃತಾ ರಾಯ್ ಅವರನ್ನು ಶೀಘ್ರದಲ್ಲಿ ಮದುವೆಯಾಗಲಿದ್ದೇನೆಂದು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ದಿಗ್ವಿಜಯ್ ಸಿಂಗ್ ಘೋಷಿಸಿದ್ದರು.












Click it and Unblock the Notifications