Lok Sabha Election 2024; ಕಾಂಗ್ರೆಸ್ ತೊರೆದ ರಾಹುಲ್ ತಂಡದ ನಾಯಕ!
ನವದೆಹಲಿ, ಜನವರಿ 14: ಲೋಕಸಭೆ ಚುನಾವಣೆ 2024ಕ್ಕೆ ಕೆಲವೇ ದಿನಗಳು ಇರುವಾಗ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ ಕಾಂಗ್ರೆಸ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಮಿಲಿಂದ್ ದಿಯೋರಾ ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರು.
ಭಾನುವಾರ ಮಿಲಿಂದ್ ದಿಯೋರಾ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. "ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ತೊರೆಯುವ ಮೂಲಕ ಕಾಂಗ್ರೆಸ್ ಜೊತೆಗಿನ ನನ್ನ ಕುಟುಂಬದ 55 ವರ್ಷದ ಬಾಂಧವ್ಯ ಅಂತ್ಯಗೊಳಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

"ಇಷ್ಟು ವರ್ಷಗಳ ಕಾಲ ನನ್ನನ್ನು ಬೆಂಬಲಿಸಿದ ಪಕ್ಷದ ನಾಯಕರು, ಕಾರ್ಯಕರ್ತರು, ಸಹೋದ್ಯೋಗಿಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಿಲಿಂದ್ ದಿಯೋರಾ ಪೋಸ್ಟ್ ಹಾಕಿದ್ದಾರೆ.
ಮಿಲಿಂದ್ ದಿಯೋರಾ ಮಹಾರಾಷ್ಟ್ರ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್ ನಾಯಕರಾಗಿದ್ದ ಮುರಳಿ ದಿಯೋರಾ ಪುತ್ರ. ಮಿಲಿಂದ್ ದಿಯೋರಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಂಡದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈಗ ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿಯೇ ಅವರು ಪಕ್ಷವನ್ನು ತೊರೆದಿದ್ದಾರೆ.
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಮಿಲಿಂದ್ ದಿಯೋರಾ ಕೆಲವು ದಿನಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಬೆಂಬಲಿಗರ ಜೊತೆ ಕಳೆದ ವಾರ ನಿರಂತರ ಸಭೆ ನಡೆಸಿದ್ದ ಮಿಲಿಂದ್ ದಿಯೋರಾ ಕಾಂಗ್ರೆಸ್ ತೊರೆಯುವ ತೀರ್ಮಾನವನ್ನು ಕೈಗೊಂಡು ಅದನ್ನು ಪ್ರಕಟಿಸಿದ್ದಾರೆ.
ಶಿವಸೇನೆಗೆ ಸೇರ್ಪಡೆ; ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ ಭಾನುವಾರ ಶಿವಸೇನೆ (ಏಕನಾಥ್ ಶಿಂಧೆ ಬಣ) ಸೇರ್ಪಡೆಯಾಗಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆಯಿಂದ ಮಿಲಿಂದ್ ದಿಯೋರಾ ಚುನಾವಣಾ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಕೆಲವು ದಿನಗಳ ಹಿಂದೆ ವಿಡಿಯೋವೊಂದನ್ನು ಮಾಡಿದ್ದ ಮಿಲಿಂದ್ ದಿಯೋರಾ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮೈತ್ರಿಕೂಟ ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದಂತೆ ಪಕ್ಷ ಏಕೆ ಠಾಕ್ರೆ ಮನವೊಲಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಗೊಂಡಿರುವ ಇಂಡಿಯಾ ಮೈತ್ರಿಕೂಟದಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಇದ್ದಾರೆ. ತಮ್ಮ ತಂದೆ ಎಲ್ಲಾ ಪಕ್ಷದ ನಾಯಕರ ಜೊತೆ ಆತ್ಮೀಯರಾಗಿದ್ದರು. ಆದರೆ ಯಾವಾಗಲೂ ಕಾಂಗ್ರೆಸ್ ಜೊತೆಗೆ ನಿಂತಿದ್ದರು ಎಂದು ಮಿಲಿಂದ್ ದಿಯೋರಾ ನೆನೆಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಮಣಿಪುರದಿಂದ 'ಭಾರತ್ ಜೋಡೋ ನ್ಯಾಯ ಯಾತ್ರೆ' ಆರಂಭಿಸಿದ್ದಾರೆ. ಇಂತಹ ಸಮಯದಲ್ಲಿಯೇ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದ ಮಿಲಿಂದ್ ದಿಯೋರಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಿಲಿಂದ್ ದಿಯೋರಾ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಮಿಲಿಂದ್ ರಾಜೀನಾಮೆ ಘೋಷಣೆಯ ಸಮಯವನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ" ಎಂದು ಟೀಕಿಸಿದ್ದಾರೆ.
"ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮಿಲಿಂದ್ ಅಸಮಾಧಾನಗೊಂಡಿದ್ದರು. ಶಿವಸೇನೆಗೆ ಸೀಟು ನೀಡುವ ಸಂಬಂಧ ರಾಹುಲ್ ಗಾಂಧಿಯನ್ನು ಅವರು ಭೇಟಿಯಾಗಲು ಬಯಸಿದ್ದರು" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
"ಇವುಗಳೆಲ್ಲ ರಾಜಕೀಯ ಪ್ರಹಸನ ಮಾತ್ರ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಪಕ್ಷವನ್ನು ತೊರೆಯಲು ಮಿಲಿಂದ್ ಮೊದಲೇ ನಿರ್ಧರಿಸಿದ್ದರು. ರಾಜೀನಾಮೆ ಘೋಷಣೆಯ ಸಮಯವನ್ನು ಮಾತ್ರ ನರೇಂದ್ರ ಮೋದಿ ನಿರ್ಧರಿಸಿದ್ದಾರೆ" ಎಂದು ಜೈರಾಮ್ ರಮೇಶ್ ದೂರಿದ್ದಾರೆ.












Click it and Unblock the Notifications