ನೆಸ್ಲೆ ನಂತರ ಅಡಿಡಾಸ್ ಜತೆ ರಾಮ್ ದೇವ್ ಪೈಪೋಟಿ?
ಬೆಂಗಳೂರು, ನ.17: ಪತಂಜಲಿ ಆಟ್ಟಾ ನ್ಯೂಡಲ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬೆನ್ನಲ್ಲೇ ಯೋಗಭ್ಯಾಸಿಗಳು ಬಳಸುವ ದಿರಿಸಿನ ಬ್ರ್ಯಾಂಡ್ ಪರಿಚಯಿಸುವುದಾಗಿ ಯೋಗಗುರು ಬಾಬಾ ರಾಮ್ ದೇವ್ ಘೋಷಿಸಿದ್ದಾರೆ. ನೆಸ್ಲೆ ಮ್ಯಾಗಿ ಜೊತೆ ಪೈಪೋಟಿಗೆ ಇಳಿದಿರುವ ರಾಮ್ ದೇವ್ ಅವರು ಈಗ ಅಡಿಡಾಸ್ ಹಾಗೂ ನೈಕಿ ವಿರುದ್ಧ ತಮ್ಮ ಬ್ರ್ಯಾಂಡ್ ಹೊರ ತರಲಿದ್ದಾರೆ.
ಅಟ್ಟಾ ನ್ಯೂಡಲ್ಸ್ ನಂತರ ಯೋಗ ದಿರಿಸುಗಳ ಬ್ರ್ಯಾಂಡ್ ಆಮೇಲೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರ ಪೇಯ, ಬೇಬಿ ಕೇರ್ ಅಲ್ಲದೆ ಸೌಂದರ್ಯವರ್ಧಕ ಉತ್ಪನ್ನಗಳನ್ನು ಹೊರ ತರಲು ಪತಂಜಲಿ ಸಂಸ್ಥೆ ಸಿದ್ಧವಾಗಿದೆ.
ಖಾದಿಗೆ ಬೆಲೆ ಸಿಗಬೇಕಿದೆ: ಖಾದಿಗೆ ಬೆಲೆ ಸಿಗಬೇಕಿದೆ ಹೀಗಾಗಿ ಖಾದಿಯಿಂದ ಮಾಡಿದ ಯೋಗದಿರಿಸುಗಳನ್ನು ಮಾಡಿ ಮಾರುಕಟ್ಟೆಗೆ ಬಿಡಲಾಗುವುದು. ದೇಶಿ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಸಿದರೆ ದೇಶದ ಆರ್ಥಿಕ ಪ್ರಗತಿ ದರ ಹೆಚ್ಚಾಗಲಿದೆ ಎಂದಿದ್ದಾರೆ.

ಪತಂಜಲಿ ಆಯುರ್ವೇದದ 250 ಗ್ರಾಂನಷ್ಟು ಜೇನುತುಪ್ಪದ ಬೆಲೆ 70 ರು ಮಾತ್ರ ಇದೆ. ನ್ಯೂಡಲ್ಸ್ ಕೂಡಾ 15 ರುನಂತೆ ನೀಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದು ನಮ್ಮ ಉದ್ದೇಶ ಎಂದರು.
ಪತಂಜಲಿ ಸಂಸ್ಥೆ ಈ ವರ್ಷ ಸುಮಾರು 2,000 ಕೋಟಿ ರು ಆದಾಯ ಗಳಿಕೆ ನಿರೀಕ್ಷೆಯಲ್ಲಿದೆ. ನ್ಯೂಡಲ್ಸ್ ಮಾರುಕಟ್ಟೆ ಹೆಚ್ಚಿಸಲು ಬಿಯಾನಿ ಸಮೂಹದೊಡನೆ ಒಪ್ಪಂದ ಮಾಡಿಕೊಂಡಿದ್ದು, ರಿಲಯನ್ಸ್ ಫ್ರೆಶ್, ಬಿಗ್ ಬಜಾರ್ ಹಾಗೂ ನೀಲ್ ಗಿರೀಸ್ ನಲ್ಲೂ ನ್ಯೂಡಲ್ಸ್ ಲಭ್ಯವಿದೆ.
ಕರ್ನಾಟಕದಲ್ಲೂ ಘಟಕ: ದೆಹಲಿ ಎನ್ ಸಿಆರ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು. ಹರ್ಯಾಣದ ವಿಶ್ವಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪತಂಜಲಿ ಉತ್ಪನ್ನಗಳ ರಾಯಭಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.












Click it and Unblock the Notifications