ಹಿಜಾಬ್ ಬಳಿಕ ಜೀನ್ಸ್ ಪ್ಯಾಂಟ್, ಟಿ- ಶರ್ಟ್ ನಿಷೇಧಿಸಿದ ಕಾಲೇಜು
ಬೆಂಗಳೂರು, ಜುಲೈ 02: ಕ್ಯಾಂಪಸ್‌ನಲ್ಲಿ ಬುರ್ಖಾ ಮತ್ತು ಹಿಜಾಬ್ ಅನ್ನು ನಿಷೇಧಿಸಿದ ನಂತರ, ಮುಂಬೈನ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜು ತನ್ನ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ಡ್ರೆಸ್ ಕೋಡ್ ಅನ್ನು ಪರಿಚಯಿಸಿದೆ, ಜೀನ್ಸ್ ಮತ್ತು ಟಿ-ಶರ್ಟ್ ಅನ್ನು ನಿಷೇಧಿಸಿದೆ.
ಈ ಮೊದಲು ಹಿಜಾಬ್ ನಿಷೇಧಿಸಿದ್ದ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜು ಈಗ ಟಿ-ಶರ್ಟ್ ಹಾಗೂ ಜೀನ್ಸ್ ತೊಡುವುದನ್ನು ನಿಷೇಧಿಸಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ವರ್ಷ ವಸ್ತ್ರಸಂಹಿತೆ ಜಾರಿಗೊಳಿಸಿದ್ದ ಈ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಮತ್ತಿತರ ಧಾರ್ಮಿಕ ಗುರುತುಗಳ ವಸ್ತ್ರತೊಟ್ಟು ಕಾಲೇಜಿಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿತ್ತು.

ಕೆಲವೇ ದಿನಗಳ ಹಿಂದೆ, ಬಾಂಬೆ ಹೈಕೋರ್ಟ್ ಕಳೆದ ವರ್ಷ ಹೊರಡಿಸಿದ ಹಿಜಾಬ್ ಮತ್ತು ಇತರ ಧಾರ್ಮಿಕ ಗುರುತುಗಳನ್ನು ನಿಷೇಧಿಸುವ ಸಂಸ್ಥೆಯ ಡ್ರೆಸ್ ಕೋಡ್ ಅನ್ನು ಪ್ರಶ್ನಿಸಿ ಕಾಲೇಜಿನ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತ್ತು.
ಹಿಜಾಬ್ ನಿಷೇಧದ ನಂತರ ಮುಂಬೈನ ಈ ಕಾಳೇಜಿನಲ್ಲಿ ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಧರಿಸುವುದನ್ನು ಕೂಡ ನಿಷೇಧಿಸಲಾಗಿದೆ. ಸೋಮವಾರ ಚೆಂಬೂರಿನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಗೇಟ್‌ನಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿದ್ದ ವಿದ್ಯಾರ್ಥಿಗಳನ್ನು ತಡೆದಿದ್ದರು. ಕಾಲೇಜು ಹೊಸ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡಿದ್ದು, ಕೆಲ ದಿನಗಳ ಹಿಂದೆಯಷ್ಟೇ ಕಾಲೇಜಿನಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.
ಇನ್ನೂ ಹರಿದ ಜೀನ್ಸ್, ಟೀ ಶರ್ಟ್‌ಗಳು, ಬಹಿರಂಗ ಉಡುಪುಗಳು ಮತ್ತು ಜೆರ್ಸಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಜೂನ್ 27 ರಂದು ಕಾಲೇಜು ನೋಟಿಸ್‌ನಲ್ಲಿ ಕಾಲೇಜು ಪ್ರಾಂಶುಪಾಲರು ಸಹಿ ಮಾಡಿದ್ದಾರೆ. ಕಾಲೇಜು ಪ್ರಾಂಶುಪಾಲರಾದ ಡಾ.ವಿದ್ಯಾಗೌರಿ ಲೇಲೆ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಲ್ಲಿ ಔಪಚಾರಿಕ ಮತ್ತು ಯೋಗ್ಯವಾದ ಉಡುಪನ್ನು ಧರಿಸಬೇಕು. ಅರ್ಧ-ಶರ್ಟ್ ಅಥವಾ ಪೂರ್ಣ-ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ಹುಡುಗಿಯರು ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಬಹುದು. ವಿದ್ಯಾರ್ಥಿಗಳು ಧರ್ಮ ಅಥವಾ ಸಾಂಸ್ಕೃತಿಕ ಅಸಮಾನತೆಯನ್ನು ಪ್ರತಿಬಿಂಬಿಸುವ ಯಾವುದೇ ಉಡುಪನ್ನು ಧರಿಸಬಾರದು ಎಂದು ತಿಳಿಸಿದೆ.
ಕಳೆದ ವರ್ಷ ಹಿಜಾಬ್ಗೆ ನಿಷೇಧ ಹೇರಲಾಗಿತ್ತು, ಇದೀಗ ಟಿ-ಶರ್ಟ್ ಹಾಗೂ ಜೀನ್ಸ್ಗೆ ನಿಷೇಧ ಹೇರಲಾಗಿದೆ. ನಿಖಾಬ್, ಹಿಜಾಬ್, ಬುರ್ಖಾ, ಸ್ಟೋಲ್, ಕ್ಯಾಪ್, ಬ್ಯಾಡ್ಜ್ ಇತ್ಯಾದಿಗಳನ್ನು ಕೊಠಡಿಯಲ್ಲಿಯೇ ಇರಿಸಿಕೊಳ್ಳಬೇಕು ಆಗ ಅವರು ಇಡೀ ಕಾಲೇಜು ಆವರಣದಲ್ಲಿ ಓಡಾಡಬಹುದಾಗಿದೆ. ಕಾಲೇಜಿನ ಪ್ರಕಾರ, ಕಾರ್ಪೊರೇಟ್ ಜಗತ್ತಿಗೆ ಸಿದ್ಧವಾಗಲು ಆಡಳಿತವು ಅವರನ್ನು ಸಿದ್ಧಪಡಿಸುತ್ತಿದೆ. ದಾಖಲಾತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್ಕೋಡ್ ಬಗ್ಗೆ ತಿಳಿಸಲಾಗಿತ್ತು. ಈ ಹಿಂದೆ ಹಿಜಾಬ್ ನಿಷೇಧದ ವಿರುದ್ಧ 9 ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications