Zomato: ಟೀಕೆಗಳ ಬಳಿಕ ಎಚ್ಚೆತ್ತ ಜೊಮ್ಯಾಟೋ; ಕೆಲವೆ ಗಂಟೆಗಳಲ್ಲಿ ಹಸಿರು ಡ್ರೆಸ್ ಕೋಡ್ ವಾಪಸ್!
ನವದೆಹಲಿ, ಮಾರ್ಚ್ 20: 'ಪ್ಯೂರ್ ವೆಜ್' ಬ್ರಾಂಡ್ ವಿತರಣಾ ಸೇವೆಗಳನ್ನು ಪ್ರಾರಂಭಿಸುವ ಜೊಮ್ಯಾಟೋ ಪ್ಲ್ಯಾನ್‌ಗೆ ಸಾಕಷ್ಟು ಪ್ರತಿಕ್ರಿಯೆ, ಮತ್ತು ಟೀಕೆಗಳು ಬಂದ ನಂತರ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ಹೊಸ ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ಆರಂಭಿಸಿದ್ದ ಶುದ್ಧ ಸಸ್ಯಾಹಾರಿ ಸೇವೆಗಳ ಹಸಿರು ಡ್ರೆಸ್ ಕೋಡ್‌ಗೆ ಬಾಯ್ ಹೇಳಿದ್ದಾರೆ.
ಜೊಮ್ಯಾಟೋದ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್‌ಗೆ ಸಾಕಷ್ಟು ಟೀಕೆಗಳು ಬರುತ್ತಿವೆ. ಆದರೂ, ಶುದ್ಧ ಸಸ್ಯಹಾರಿ ಸರ್ವಿಸ್ ಮುಂದುವರೆಸಿರುವ ಸಂಸ್ಥೆ ಸಮವಸ್ತ್ರ ಮಾತ್ರ ಬದಲಾಯಿಸಿದೆ. ವೆಜ್, ನಾನ್ ವೆಜ್ ಎಲ್ಲಾ ಬಗೆಯ ಆಹಾರ ಡೆಲಿವರಿ ಮಾಡುವವರು ಕೂಡ ಕೆಂಪು ಸಮವಸ್ತ್ರ ಧರಿಸುತ್ತಾರೆ ಎಂದು ಹೇಳಿದೆ.

"ನಾವು ಸಸ್ಯಾಹಾರಿಗಳಿಗಾಗಿ ಸರ್ವಿಸ್ ಅನ್ನು ಮುಂದುವರಿಸಲಿದ್ದೇವೆ. ಹಸಿರು ಬಣ್ಣದ ಬಟ್ಟೆ ಧರಿಸಿ ಈ ಸರ್ವಿಸ್ ನೀಡುವ ಯೋಜನೆಯನ್ನು ವಾಪಸ್ ಪಡೆಯಲು ನಾವು ನಿರ್ಧರಿಸಿದ್ದೇವೆ. ನಮ್ಮ ಎಲ್ಲಾ ರೈಡರ್‌ಗಳು ನಮ್ಮ ನಿಯಮಿತ ಸರ್ವಿಸ್ ಮತ್ತು ಸಸ್ಯಾಹಾರಿಗಳಿಗಾಗಿ ಕೆಂಪು ಬಟ್ಟೆಯನ್ನೇ ಧರಿಸುತ್ತಾರೆ" ಎಂದು ಗೋಯಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಜೊಮ್ಯಾಟೋ ಪ್ಲಾಟ್‌ಫಾರ್ಮ್ ತನ್ನ ಗ್ರಾಹಕರಿಗೆ ಶುದ್ಧ ಸಸ್ಯಾಹಾರಿ ಆಹಾರದ ಆದ್ಯತೆಗಳೊಂದಿಗೆ ವಿತರಣೆಯನ್ನು ಸುಲಭಗೊಳಿಸಲು ವೆಜ್ ಮೋಡ್ ಅನ್ನು ಪ್ರಾರಂಭಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಬಂದಿದೆ. ಭಾರತದಲ್ಲಿ ತನ್ನ 100% ಸಸ್ಯಾಹಾರಿ ಗ್ರಾಹಕರಿಗೆ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ.

ಸಂಸ್ಥೆ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ತಮ್ಮ ಸಾಮಾಜಿಕ ಜಾಲತಾಣಗಲ್ಲಿ, ಜಾಗತಿಕವಾಗಿ ಭಾರತವು ಶೇಕಡಾವಾರು ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿದೆ ಮತ್ತು ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಹೊಸ ಸರ್ವಿಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
"ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿದೆ. ನಮಗೆ ಅವರಿಂದ ಸಿಕ್ಕ ಪ್ರಮುಖ ಪ್ರತಿಕ್ರಿಯೆಯೆಂದರೆ, ಅವರು ತಮ್ಮ ಆಹಾರವನ್ನು ಹೇಗೆ ಬೇಯಿಸುತ್ತಾರೆ ಎಂಬುದರ ಕುರಿತು ಅವರು ತುಂಬಾ ನಿರ್ದಿಷ್ಟವಾಗಿರುತ್ತಾರೆ. ದೇಶದ ಸಸ್ಯಾಹಾರಿಗಳಿಂದ ಬಂದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಅವರ ಆಹಾರದ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಇಂದು, 100 % ಸಸ್ಯಾಹಾರಿ ಆಹಾರದ ಆದ್ಯತೆಯನ್ನು ಹೊಂದಿರುವ ಗ್ರಾಹಕರಿಗಾಗಿ ಜೊಮಾಟೊದಲ್ಲಿ "ಶುದ್ಧ ವೆಜ್ ಫ್ಲೀಟ್" ಜೊತೆಗೆ "ಪ್ಯೂರ್ ವೆಜ್ ಮೋಡ್" ಅನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.
ಇನ್ನು, ಹೊಸದಾಗಿ ಪ್ರಾರಂಭಿಸಲಾದ ಈ ಶುದ್ಧ ವೆಜ್ ಮೋಡ್ ಅಥವಾ ಪ್ಯೂರ್ ವೆಜ್ ಫ್ಲೀಟ್ ಸೇವೆಯು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಪ್ರೇರಿತವಾಗಿಲ್ಲ. ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.












Click it and Unblock the Notifications