ನಾರ್ಕೋ ಪರೀಕ್ಷೆಗೆ ಬ್ರಿಜ್ ಭೂಷಣ್ ಒಪ್ಪಿಗೆ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತಾವೂ ಸಿದ್ಧ ಎಂದ ಕುಸ್ತಿಪಟುಗಳು
ನವದೆಹಲಿ, ಮೇ. 22: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆ ತೀವ್ರವಾಗುತ್ತಿದ್ದು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಾರ್ಕೋ ಪರೀಕ್ಷೆಗೆ ಒಳಗಾಗಲು ತಾವೂ ಕೂಡ ಸಿದ್ಧ ಎಂದು ಕುಸ್ತಿಪಟುಗಳು ಮೇ 22 ರ ಸೋಮವಾರ ಹೇಳಿದ್ದಾರೆ. ಬ್ರಿಜ್ ಭೂಷಣ್ ಸುಳ್ಳು ಪತ್ತೆ ಪರೀಕ್ಷೆಗೆ ಒಪ್ಪಿಗೆ ನೀಡಿದ ನಂತರ, ಪ್ರತಿಭಟನಾ ನಿರತ ಕುಸ್ತಿಪಟುಗಳು ತಾವು ಕೂಡ ಅದಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಕುಸ್ತಿಪಟುಗಳು ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಇಬ್ಬರಿಗೂ ಪರೀಕ್ಷೆಯನ್ನು ನಡೆಸಬೇಕು ಮತ್ತು ಅದನ್ನು ಪ್ರಸಾರ ಮಾಡಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರ ಮೇಲೆ ಇದೇ ಪರೀಕ್ಷೆಯನ್ನು ನಡೆಸಿದರೆ ತಾನು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಭಾನುವಾರ ಹೇಳಿದ್ದರು.

ನಾರ್ಕೋ ಪರೀಕ್ಷೆಗೆ ಸಿದ್ಧರಿದ್ದೇವೆ ಎಂದು ಪುನಿಯಾ ಹೇಳಿದ್ದಾರೆ. "ನಾವು ಬಹಳ ಹಿಂದೆಯೇ ನಾರ್ಕೊ ಪರೀಕ್ಷೆಗೆ ಸಿದ್ಧರಿದ್ದೇವೆ. ಈ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಮಾಡಬೇಕು ಮತ್ತು ಅದನ್ನು ಪ್ರಸಾರ ಮಾಡಬೇಕು. ಇದರಿಂದ ಡಬ್ಲ್ಯುಎಫ್‌ಐ ಮುಖ್ಯಸ್ಥರಿಗೆ ಮತ್ತು ದೂರು ದಾಖಲಿಸಿದ ಕುಸ್ತಿಪಟುಗಳಿಗೆ ಯಾವ ಪ್ರಶ್ನೆಗಳನ್ನು ಹಾಕಲಾಗಿದೆ ಎಂಬುದನ್ನು ಪ್ರತಿಯೊಬ್ಬರೂ ನೋಡುತ್ತಾರೆ" ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.
"ಬ್ರಿಜ್ ಭೂಷಣ್ ಶರಣ್ ಸಿಂಗ್ ವಿನೇಶ್ ಪೋಗಟ್ ಮತ್ತು ಬಜರಂಗ್ ಹೆಸರನ್ನು ಮಾತ್ರ ಹೇಳಿದ್ದಾರೆ. ಆದರೆ ನಾನಷ್ಟೆ ಅಲ್ಲ, ದೂರು ನೀಡಿದ ಎಲ್ಲಾ ಹುಡುಗಿಯರು ನಾರ್ಕೋ ಪರೀಕ್ಷೆಗೆ ಒಳಗಾಗಲು ಸಿದ್ಧರಿದ್ದಾರೆ. ಆದರೆ ಅದನ್ನು ಲೈವ್ ಮಾಡಬೇಕು, ನಮ್ಮ ದೇಶದ ಹೆಣ್ಣುಮಕ್ಕಳೊಂದಿಗೆ ಏನೇನು ಅನುಭವಿಸುತ್ತಿದ್ದಾರೆ ಎಂಬುದನ್ನು ಎಲ್ಲರು ತಿಳಿದುಕೊಳ್ಳಬೇಕು" ಎಂದು ವಿನೇಶ್ ಫೋಗಟ್ ಆಗ್ರಹಿಸಿದ್ದಾರೆ.

ನಡೆಯುತ್ತಿರುವ ಪ್ರತಿಭಟನೆಗಳ ಸಂದರ್ಭದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ಟಾರ್ ಮಾಡಲಾಗುತ್ತಿದೆ ಎಂದು ಬಜರಂಗ್ ಪುನಿಯಾ ಆರೋಪಿಸಿದ್ದಾರೆ. "ಅವರು ಕಾನೂನಿನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾರೆ ಮತ್ತು ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ. ಅವರನ್ನು ಸ್ಟಾರ್ ಮಾಡಬಾರದು, ಅವರು ಅಪರಾಧ ಮಾಡಿದ್ದಾರೆ" ಎಂದು ಜಂತರ್ ಮಂತರ್‌ನಲ್ಲಿ ಹೇಳಿದ್ದಾರೆ.
ಭಾನುವಾರ, ಕುಸ್ತಿಪಟುಗಳನ್ನು ಬೆಂಬಲಿಸಿ ಖಾಪ್ ಮಹಾಪಂಚಾಯತ್ ನಡೆದಿದ್ದು, ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸುವ ಮಹಿಳೆಯರು ಮೇ 28 ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸುವ ಹೊಸ ಸಂಸತ್ ಭವನದ ಮುಂದೆ ಮಹಿಳಾ ಪಂಚಾಯತ್ ನಡೆಸುವುದಾಗಿ ನಿರ್ಧರಿಸಿದ್ದಾರೆ ಮತ್ತೊಂದೆಡೆ, ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡ ಜೂನ್ 5 ರಂದು ಅಯೋಧ್ಯೆಯಲ್ಲಿ ದೊಡ್ಡ ಮೆರವಣಿಗೆ ಘೋಷಿಸಿದ್ದಾರೆ.












Click it and Unblock the Notifications