ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ನಟಿಯ ಸಹ ನಟ ಶೀಜಾನ್ ಖಾನ್ ಬಂಧನ
ಮುಂಬೈ, ಡಿ. 25: ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ.
ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವಿದೆ. ಶೀಜಾನ್ ಮೊಹಮ್ಮದ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಸೋಮವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಮೃತ ನಟಿಯ ಮರಣೋತ್ತರ ಪರೀಕ್ಷೆಯನ್ನು ಭಾನುವಾರ ಮುಂಜಾನೆ ನೈಗಾಂವ್‌ನ ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

"ತುನಿಷಾ ಶರ್ಮಾ ಅವರ ಶವ ಪರೀಕ್ಷೆಯನ್ನು ಮುಂಜಾನೆ 4:30 ರವರೆಗೆ ನಡೆಸಲಾಯಿತು. ಈ ವೇಳೆ 4 ರಿಂದ 5 ಪೊಲೀಸ್ ಸಿಬ್ಬಂದಿ ಸಹ ಹಾಜರಿದ್ದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿದೆ.
20 ವರ್ಷ ವಯಸ್ಸಿನ ಯುವ ನಟಿ ಶನಿವಾರ ಶೂಟಿಂಗ್ ವೇಳೆಯಲ್ಲಿ ಚಹಾ ವಿರಾಮದ ನಂತರ ವಾಶ್‌ರೂಮ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಎಷ್ಟೋ ಹೊತ್ತಾದರೂ ಶೌಚಾಲಯದಿಂದ ಆಕೆ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳಹೊಕ್ಕಬೇಕಾಯಿತು ಎಂದು ವಾಲೀವ್ ಪೊಲೀಸರು ತಿಳಿಸಿದ್ದಾರೆ. ಶೂಟಿಂಗ್ ಸಿಬ್ಬಂದಿ ಆಕೆಯನ್ನು ಮಧ್ಯರಾತ್ರಿ 1:30 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ತುನಿಷಾ ಶರ್ಮಾ ಅವರ ಸಹೋದ್ಯೋಗಿಗಳು ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ, ಆದರೆ ಪೊಲೀಸರು ಸ್ಥಳದಲ್ಲೇ ತನಿಖೆ ನಡೆಸಿದ್ದು, ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ನಟಿಯ ಸಾವನ್ನು ಕೊಲೆ ಮತ್ತು ಆತ್ಮಹತ್ಯೆ ಎರಡು ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ನಟಿಯ ತಾಯಿ ದೂರು ದಾಖಲಿಸಿದ ನಂತರ ತುನುಷಾ ಅವರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಬಂಧನವಾಗಿದ, ಬಂಧಿತ ನಟ 'ಅಲಿ ಬಾಬಾ: ದಸ್ತಾನ್-ಎ-ಕಾಬೂಲ್' ಶೋನಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ತುನಿಷಾ ಶರ್ಮಾ ಅವರು ಸೋನಿ ಟಿವಿ ಶೋ 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್' ನಲ್ಲಿ ಬಾಲ ನಟಿಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಅಂದಿನಿಂದ, ಅವರು ಹಲವಾರು ಧಾರವಾಹಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ನಟಿ ಕತ್ರಿನಾ ಕೈಫ್ ಅವರ ಪಾತ್ರಗಳ ಬಾಲ್ಯದ ಪಾತ್ರಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
'ಅಲಿ ಬಾಬಾ: ದಾಸ್ತಾನ್-ಎ-ಕಾಬೂಲ್' ಚಿತ್ರದಲ್ಲಿ ಶೆಹಜಾದಿ ಮರಿಯಮ್ ಪಾತ್ರವನ್ನು ನಿರ್ವಹಿಸಿದ ತುನಿಷಾ, 'ಫಿತೂರ್' ಮತ್ತು 'ಬಾರ್ ಬಾರ್ ದೇಖೋ', ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.












Click it and Unblock the Notifications