ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲಿರುವ ನಟ ಕಮಲ್ ಹಾಸನ್
ನವದೆಹಲಿ, ಡಿ. 18: ನಟ ಕಮಲ್ ಹಾಸನ್ ಅವರು ಡಿಸೆಂಬರ್ 24 ರಂದು ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ನಟ, ರಾಜಕಾರಣಿ ಕಮಲ್ ಹಾಸನ್ ಮುಂದಿನ ವಾರ ದೆಹಲಿಯಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೇರಿಕೊಳ್ಳಲಿದ್ದಾರೆ. ಸೂಪರ್‌ಸ್ಟಾರ್ ಅವರನ್ನು ಯಾತ್ರೆಯಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಆಹ್ವಾನಿಸಿದ್ದಾರೆ ಎಂದು ಅವರ ಪಕ್ಷವಾದ ಮಕ್ಕಳ್ ನೀದಿ ಮೈಯಂ ಹೇಳಿದೆ.
ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24 ರಂದು ದೆಹಲಿ ಪ್ರವೇಶಿಸಲಿದ್ದು, ಸುಮಾರು ಎಂಟು ದಿನಗಳ ವಿರಾಮದ ನಂತರ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ, ಹರಿಯಾಣಕ್ಕೆ ತೆರಳಲಿದೆ. ಮುಂದಿನ ತಿಂಗಳು ಪಂಜಾಬ್ ಪ್ರವೇಶಿಸಲಿದ್ದು, ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದೆ.

ಸೆಪ್ಟಂಬರ್ ತಿಂಗಳಿನಲ್ಲಿ ಕನ್ಯಾಕುಮಾರಿಯಿಂದ ಆರಂಭಗೊಂಡು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿ ಎಂಟು ರಾಜ್ಯಗಳಲ್ಲಿ ಸಂಚರಿಸಿದೆ. ಶುಕ್ರವಾರ ಯಾತ್ರೆಯ 100 ದಿನಗಳನ್ನು ಪೂರೈಸಿದೆ.
100 ದಿನಗಳನ್ನು ಯಶಸ್ಸಿನ ಕಾರ್ಯಕ್ರಮದಲ್ಲಿ ಗಾಯಕಿ ಸುನಿಧಿ ಚೌಹಾಣ್ ಕಾರ್ಯಕ್ರಮ ನಡೆಸಿ ಕೊಟ್ಟಿದ್ದರು.
ಬುಧವಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ನಟಿ ಸ್ವರಾ ಭಾಸ್ಕರ್ ರಾಹುಲ್ ಗಾಂಧಿಗೆ ಸಾಥ್ ನೀಡಿದ್ದರು. ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮತ್ತು ಕಾಂಗ್ರೆಸ್ ನಾಯಕ ವಿಜೇಂದರ್ ಸಿಂಗ್ ಕೂಡ ಮಧ್ಯಪ್ರದೇಶದಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications