ದೆಹಲಿ ಸುಗ್ರೀವಾಜ್ಞೆ ಮುನಿಸು: ಬೆಂಗಳೂರು ವಿಪಕ್ಷಗಳ ಸಭೆಗೆ ಆಪ್‌ಗೆ ಕಾಂಗ್ರೆಸ್‌ನಿಂದ ಆಹ್ವಾನ
ನವದೆಹಲಿ, ಜುಲೈ. 07: ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಸಮಾನ ಮನಸ್ಕ ವಿರೋಧ ಪಕ್ಷಗಳ ಎರಡನೇ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆ ಎಂದು ಪಕ್ಷದ ನಾಯಕ ರಾಘವ್ ಚಡ್ಡಾ ಶುಕ್ರವಾರ ತಿಳಿಸಿದ್ದಾರೆ.
ಆದರೂ, 2024 ರ ಲೋಕಸಭೆ ಚುನಾವಣೆಯ ಮೊದಲು ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಯಾವುದೇ ಹೆಚ್ಚಿನ ಚರ್ಚೆಯು ದೆಹಲಿ ಸುಗ್ರೀವಾಜ್ಞೆ ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಔಪಚಾರಿಕವಾಗಿ ಸ್ಪಷ್ಟಪಡಿಸಿದಾಗ ಮಾತ್ರ ನಡೆಯುತ್ತದೆ ಎಂದು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹೇಳಿದ್ದಾರೆ.

ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ದೆಹಲಿ ಸರ್ಕಾರದಿಂದ ನಿಯಂತ್ರಣವನ್ನು ಕಸಿದುಕೊಳ್ಳುವ ಕೇಂದ್ರದ ಸುಗ್ರೀವಾಜ್ಞೆಯು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಜಂಟಿಯಾಗಿ ತೆಗೆದುಕೊಳ್ಳುವ ಮತ್ತು ಸಾಮಾನ್ಯ ಕಾರ್ಯಸೂಚಿಯನ್ನು ರೂಪಿಸುವ ಪ್ರಯತ್ನಗಳಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವೆ ವಿರಸ ಮೂಡಿದೆ.
ಬಿಹಾರದ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಮೊದಲ ನಿರ್ಣಾಯಕ ಸಭೆಯಲ್ಲಿ, ವಿವಾದಾತ್ಮಕ ಸುಗ್ರೀವಾಜ್ಞೆಯ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ಮುಂದಿನ ಸಭೆಗಳಲ್ಲಿ ಭಾಗವಹಿಸಲು ಪಕ್ಷಕ್ಕೆ ಕಷ್ಟವಾಗುತ್ತದೆ ಎಂದು ಎಎಪಿ ಹೇಳಿತ್ತು.
"ಕಾಂಗ್ರೆಸ್ ಪಕ್ಷವು ಎಎಪಿಗೆ (ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆಗೆ) ಆಹ್ವಾನವನ್ನು ಕಳುಹಿಸಿದೆ. ಆದರೆ, ಪಾಟ್ನಾ ವಿರೋಧ ಪಕ್ಷದ ಸಭೆಯಲ್ಲಿ, ಎಲ್ಲಾ ಸಮಾನ ಮನಸ್ಕ ಪಕ್ಷಗಳ ಮುಂದೆ, ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ 15 ದಿನಗಳ ಮೊದಲು ದೆಹಲಿ ಸುಗ್ರೀವಾಜ್ಞೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು" ಎಂದು ರಾಘವ್ ಚಾಡಾ ಎಎನ್‌ಐಗೆ ತಿಳಿಸಿದ್ದಾರೆ.

"ಕಾಂಗ್ರೆಸ್ ಶೀಘ್ರದಲ್ಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ಅವರ ಔಪಚಾರಿಕ ಪ್ರಕಟಣೆಯ ನಂತರ ಮಾತ್ರ ಎಲ್ಲಾ ಮುಂದಿನ ಚರ್ಚೆಗಳು ನಡೆಯುತ್ತವೆ" ಎಂದು ಹೇಳಿದ್ದಾರೆ.
ಎಎಪಿ ವಕ್ತಾರ ಸಂದೀಪ್ ಪಾಠಕ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ಬೆಂಗಳೂರು ಸಭೆ ಫಲಪ್ರದವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. "ಈ ಬಾರಿ ಮೋದಿ ಸರ್ಕಾರವನ್ನು (2024 ರಲ್ಲಿ ಮತ್ತೆ ಅಧಿಕಾರಕ್ಕೆ ಬರದಂತೆ) ತಡೆಯಲು ದೇಶಕ್ಕೆ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡುವ ಅಗತ್ಯವಿದೆ" ಎಂದು ಪಿಟಿಐಗೆ ತಿಳಿಸಿದ್ದಾರೆ.
ಇತ್ತ, ಕೇಂದ್ರ ಸರ್ಕಾರವು ಇತ್ತೀಚೆಗೆ ಹೊರಡಿಸಿದ ಸುಗ್ರೀವಾಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.












Click it and Unblock the Notifications