CBI: ಕೇಜ್ರಿವಾಲ್ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ, ಕಾರಣ ತಿಳಿಯಿರಿ!
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಅತ್ತ ಲೋಕಸಭೆ ಚುನಾವಣೆಗೆ ಎಎಪಿ ಸಿದ್ಧತೆ ಆರಂಭಿಸಿರುವ ಸಂದರ್ಭದಲ್ಲೇ ದೊಡ್ಡ ಆಘಾತ ಸಿಕ್ಕಿದೆ. ಹೊಸ ಮನೆ ಕಟ್ಟಿಸಿದ್ದೇ ಕೇಜ್ರಿವಾಲ್‌ಗೆ ಕಂಟಕ ತಂದಿದ್ದು, ದೆಹಲಿ ಸಿಎಂ ಇದೀಗ ಸಿಬಿಐ ಬಲೆಗೆ ಸಿಲುಕಿದಂತಾಗಿದೆ. ಹಾಗಾದ್ರೆ ಕೇಜ್ರಿವಾಲ್‌ಗೆ ಎದುರಾಗಿರುವ ಸಂಕಷ್ಟವಾದ್ರು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರ ಅಧಿಕೃತ ನಿವಾಸ ಕಟ್ಟಿಸುವಾಗ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಅರವಿಂದ್ ಕೇಜ್ರಿವಾಲ್ ಅಧಿಕೃತ ನಿವಾಸ ನಿರ್ಮಾಣದ ಟೆಂಡರ್ ನಿಯಮಗಳ ಉಲ್ಲಂಘನೆ ಸೇರಿ ಹಲವಾರು ಆರೋಪಗಳ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ. ಈಗಾಗಲೇ ಯೋಜನೆ ಹೇಗೆ ಮಂಜೂರಾಗಿದೆ ಎಂಬುದರ ಕುರಿತು ಸಿಬಿಐ ಲೋಕೋಪಯೋಗಿ ಇಲಾಖೆಯಿಂದ (PWD) ದಾಖಲೆ ಕೇಳಿದೆ ಎನ್ನಲಾಗಿದೆ. ಈ ಬೆಳವಣಿಗೆ ಇದೀಗ ಆಮ್ ಆದ್ಮಿ ಪಕ್ಷ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ನಡುವೆ ಮತ್ತೊಂದು ಸುತ್ತಿನ ಫೈಟ್‌ಗೆ ಕಾರಣವಾಗಿದೆ.

ದಾಖಲೆ ಸಲ್ಲಿಸಲು ಸಿಬಿಐ ಡೆಡ್‌ಲೈನ್!
ಕೇಜ್ರಿವಾಲ್ ಅವರ ಅಧಿಕೃತ ನಿವಾಸ ನಿರ್ಮಾಣ ಯೋಜನೆ ಅನುಮೋದನೆಗೆ ಸಂಬಂಧಿಸಿದ ದಾಖಲೆ, ಮಾರ್ಬಲ್ ಫ್ಲೋರಿಂಗ್ ಹಾಗೂ ಗುತ್ತಿಗೆದಾರರ ಪಾವತಿ ವಿವರ ಕೇಳಲಾಗಿದೆಯಂತೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಿಬಿಐಗೆ ಸಲ್ಲಿಸಬೇಕಿದೆ ಎಂದು ಸೂಚಿಸಲಾಗಿದೆ. ಹಾಗೇ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೀಡಿದ ಅನುಮತಿಯ ದಾಖಲೆಗಳನ್ನು ಕೂಡ ಕೇಳಲಾಗಿದೆ. ಈ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧದ ಆರೋಪದ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ.
ಬಿಜೆಪಿ ವಿರುದ್ಧ ಎಎಪಿ ಆಕ್ರೋಶ!
ಇನ್ನು ಕೇಜ್ರಿವಾಲ್ ಅವರ ಅಧಿಕೃತ ನಿವಾಸ ನಿರ್ಮಾಣ ಯೋಜನೆ ಸಂಬಂಧ ಸಿಬಿಐ ಈಗ ತನಿಖೆ ಆರಂಭಿಸಿದ ಬಗ್ಗೆ ಎಎಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. ಎಎಪಿ ವಿರುದ್ಧ ಬಿಜೆಪಿ ತನ್ನೆಲ್ಲಾ ಶಕ್ತಿ ಬಳಸುತ್ತಿದೆ. ಈಗಾಗಲೇ ಅರವಿಂದ್ ಕೇಜ್ರಿವಾಲ್ ವಿರುದ್ಧ 50ಕ್ಕೂ ಹೆಚ್ಚು ಕೇಸ್ ದಾಖಲಿಸಿದೆ. ಅದರಿಂದ ಏನೂ ಆಗಿಲ್ಲ, ಮುಂದೆ ಏನೂ ಆಗಲ್ಲ. ಅದು ಎಷ್ಟೇ ತನಿಖೆಗಳು ನಡೆದರೂ ಕೇಜ್ರಿವಾಲ್ ಅವರ ಹೋರಾಟ ನಿಲ್ಲುವುದಿಲ್ಲ. ಸಾಮಾನ್ಯ ಜನರ ಪರ ಕೇಜ್ರಿವಾಲ್ ತಮ್ಮ ಹೋರಾಟ ಮುಂದುವರಿಸ್ತಾರೆ ಎಂದು ಆಪ್ ಸವಾಲು ಹಾಕಿದೆ.
ಹೀಗೆ ಬಿಜೆಪಿ ಮತ್ತು ಆಪ್ ಮಧ್ಯೆ ದೆಹಲಿಯಲ್ಲಿ ಹೊಸ ತಿಕ್ಕಾಟ ಆರಂಭವಾಗುವ ಸೂಚನೆ ಸಿಕ್ಕಿದೆ. ಅದರಲ್ಲೂ ಸಿಬಿಐ ತನಿಖೆ ಆರಂಭಿಸಿದ ಹಿನ್ನೆಲೆ ಆಮ್ ಆದ್ಮಿ ಪಕ್ಷ ರೊಚ್ಚಿಗೆದ್ದಿದೆ. ಈ ತಿಕ್ಕಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ಜೋರಾಗುವ ಸಾಧ್ಯತೆಯೂ ಇದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಗೆ ಇದು ಯಾವೆಲ್ಲಾ ಪಕ್ಷಗಳಿಗೆ ಅಸ್ತ್ರವಾಗಿ ಬದಲಾಗುತ್ತೋ ಅಂತಾ ಕಾದು ನೋಡಬೇಕಿದೆ.












Click it and Unblock the Notifications