ಹೊಸ ದಾಖಲೆ: ಭಾರತದಲ್ಲಿ ಒಂದೇ ದಿನ 93 ಲಕ್ಷ ಜನರಿಗೆ ಕೊವಿಡ್-19 ಲಸಿಕೆ
ನವದೆಹಲಿ, ಆಗಸ್ಟ್ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ರೂಪಾಂತರ ಅಲೆಗಳ ಭೀತಿ ನಡುವೆ ಲಸಿಕೆ ವಿತರಣೆಯಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ದೇಶದಲ್ಲಿ ಒಂದೇ ದಿನ ಅತ್ಯಧಿಕ ಡೋಸ್ ಕೊವಿಡ್-19 ಲಸಿಕೆ ವಿತರಿಸಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಿಸುವ ಉದ್ದೇಶದಿಂದ ಜನವರಿ 16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಲಸಿಕೆ ವಿತರಣೆಗೆ ಚಾಲನೆ ನೀಡಿದರು. ಅಂದಿನಿಂದ 224 ದಿನಗಳಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸುಕೊಂಡು ಬರಲಾಗುತ್ತಿದೆ.
ದೇಶಾದ್ಯಂತ ಶುಕ್ರವಾರ ವಿತರಿಸಿದ ಕೊರೊನಾವೈರಸ್ ಲಸಿಕೆಯ ಸಂಖ್ಯೆಯು ಹೊಸ ದಾಖಲೆಯನ್ನು ಬರೆದಿದೆ. ರಾತ್ರಿ 7 ಗಂಟೆ ವೇಳೆಗೆ 93 ಲಕ್ಷ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಭಾರತದಲ್ಲಿ ಈವರೆಗೂ 62,09,43,580 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೆ 59,86,36,380 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ.

ಕೊವಿಡ್-19 ಲಸಿಕೆ ಪಡೆದವರ ಅಂಕಿ-ಅಂಶಗಳು
ಕೊರೊನಾವೈರಸ್ ಎರಡನೇ ಅಲೆಯಲ್ಲಿ ಅತಿಹೆಚ್ಚು ಸೋಂಕು ತಗುಲಿರುವುದು ಹಾಗೂ ಸಾವಿನ ಸಂಖ್ಯೆಯಲ್ಲಿ ಅತಿಹೆಚ್ಚು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚಾಗಿದೆ. 10356756 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 8320406 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 18316023 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 12948955 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 479148993 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 141794587 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಅತಿಹೆಚ್ಚು ಲಸಿಕೆ ವಿತರಿಸಿದ ರಾಜ್ಯಗಳ ಪಟ್ಟಿ
ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 18-44 ವಯೋಮಾನದ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಇದರ ಹೊರತಾಗಿ ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ದೆಹಲಿ, ಹರಿಯಾಣ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ 18-44 ವಯೋಮಾನದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕಿತರಿಗೆ ನಾಲ್ಕು ಹಂತದಲ್ಲಿ ಲಸಿಕೆ
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.
ಕೊವಿಡ್-19 ಲಸಿಕೆ ಪೂರೈಕೆ ಆಗಿದ್ದೆಷ್ಟು, ಬಳಸಿದ್ದೆಷ್ಟು?
2021ರ ಆಗಸ್ಟ್ 27ರ ಅಂಕಿ-ಅಂಶಗಳ ಪ್ರಕಾರ, 59,86,36,380 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
* ಪೂರೈಕೆಯಾದ ಲಸಿಕೆ ಪ್ರಮಾಣ - 59,86,36,380
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 17,64,000
* ಕೊವಿಡ್-19 ಲಸಿಕೆಯ ಲಭ್ಯತೆ - 4,05,05,746












Click it and Unblock the Notifications