ಭಾರತದಲ್ಲಿ ಒಂದೇ ದಿನ 80472 ಮಂದಿಗೆ ಕೊವಿಡ್-19 ಸೋಂಕು
ನವದೆಹಲಿ, ಸಪ್ಟೆಂಬರ್.30: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 62 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲೇ 80472 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಬಟ್ಟಿದೆ.
ಕಳೆದ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಬುಧವಾರ ಬೆಳಗ್ಗೆ 9 ಗಂಟೆವರೆಗೂ ಕೊರೊನಾವೈರಸ್ ಸೋಂಕಿಗೆ 1179 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆ 97497ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 62,25,764ಕ್ಕೆ ಏರಿಕೆಯಾಗಿದೆ. ಈ ಪೈಕಿ 51,87,826 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ 9,40,441 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

7,41,96,729 ಜನರಿಗೆ ಕೊರೊನಾವೈರಸ್ ಪರೀಕ್ಷೆ:
ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ತಪಾಸಣೆ ವೇಗವನ್ನು ಹೆಚ್ಚಿಸುವುದೇ ಮದ್ದು ಎನ್ನಲಾಗುತ್ತಿದೆ. ಈ ಹಿನ್ನೆಲೆ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕ್ಷಿಪ್ರಗತಿಯಲ್ಲಿ ಹೆಚ್ಚಿಸಲಾಗುತ್ತಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 10,86,688 ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಇದುವರೆಗೂ 7,41,96,729 ಜನರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.
ಕೊರೊನಾವೈರಸ್ ಅಟ್ಟಹಾಸಕ್ಕೆ ಭಾರತವಷ್ಟೇ ಅಲ್ಲದೇ ವಿಶ್ವದ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಜಗತ್ತಿನಲ್ಲಿ ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಮಹಾಮಾರಿಗೆ 10,12,657 ಜನರು ಪ್ರಾಣ ಬಿಟ್ಟಿದ್ದಾರೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,38,43,974ರಷ್ಟಿದ್ದು, 2,51,48,264 ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications