Congress MPs Suspended: ಐದು ಕಾಂಗ್ರೆಸ್ ಸಂಸದರ ಅಮಾನತು, ಆಗಿದ್ದೇನು?
ನವದೆಹಲಿ, ಡಿಸೆಂಬರ್ 14: ರಾಷ್ಟ್ರ ರಾಜಧಾನಿಯ ನೂತನ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಿ ಹತ್ತು ದಿನ ಕಳೆದಿದೆ. ಸದನದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಐವರು ಕಾಂಗ್ರೆಸ್ ಸದಸ್ಯರನ್ನು ಲೋಕಸಭೆಯಿಂದ ಗುರುವಾರ ಅಮಾನತುಗೊಳಿಸಲಾಗಿದೆ.
ಹೌದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಲೋಕಸಭೆಯಲ್ಲಿ ಈ ಐದು ಜನರ ಅಮಾನತಿಗೆ ಪ್ರಸ್ತಾವನೆಯನ್ನು ಮಂಡಿಸಿದರು. ಬುಧವಾರ ನಡೆದ ನಡೆದ ಭದ್ರತಾ ಲೋಪದ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದ ಘಟನೆ ಕುರಿತು ಸದನಕ್ಕೆ ತಿಳಿಸಿದ ಬಳಿಕ ಜೋಶಿಯವರು ಅಮಾನತಿನ ಪ್ರಸ್ತಾಪ ಸದನದ ಮುಂದಿಟ್ಟರು.

ಚಳಿಗಾಲ ಅಧಿವೇಶನ ಇದೇ ಡಿಸೆಂಬರ್ 4ರಿಂದ ಆರಂಭವಾಗಿದ್ದು, ಮುಂದಿನ ಡಿಸೆಂಬರ್ 22 ರವರೆಗೆ ನಡೆಯಲಿದೆ. ಸದ್ಯ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ (ಡಿ.22ರವರೆಗೆ) ಕಾಂಗ್ರೆಸ್ ಸಂಸದರಾದ ಟಿ.ಎನ್ ಪ್ರತಾಪನ್, ರಮ್ಯಾ ಹರಿದಾಸ್ ಹೈಬಿ ಈಡನ್, ಎಸ್ ಜ್ಯೋತಿಮಣಿ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಮಾನತುಗೊಳಿಸುವಂತೆ ಮಂಡನೆ ಮೂಲಕ ಮನವಿ ಮಾಡಿದರು.
ವಿಪಕ್ಷಗಳ ಘೋಷಣೆ ಮಧ್ಯ ಪ್ರಸ್ತಾವ ಮಂಡಿಸಿದ ಜೋಶಿ
ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಪ್ರಸ್ತಾವನೆಯನ್ನು ಮಂಡಿಸಿ ಅಂಗೀಕರಿಸಿದಾಗ ಬಿಜೆಡಿಯ ಭರ್ತೃಹರಿ ಮಹತಾಬ್ ಅವರು ಅಧ್ಯಕ್ಷರಾಗಿದ್ದರು. ಸದನದಲ್ಲಿ ಹಳದಿ ಸ್ಮೋಕ್ ಕ್ಯಾನ್ ಹಾಕಿ ಭಧ್ರತೆಗೆ ಧಕ್ಕೆ ತಂದ ಘಟನೆ ಬುಧವಾರ ನಡೆದಿತ್ತು. ಇದರ ಉನ್ನತ ಮಟ್ಟದ ತನಿಖೆ ಕುರಿತು ಸ್ಪೀಕರ್ ಓಂ ಬಿರ್ಲಾ ಅವರು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇತ್ತ ಈ ಕುರಿತು ವಿವರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಪ್ರಕರಣ ತನಿಖೆ ಆರಂಭಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಸಂದರ್ಶಕರ ಗ್ಯಾಲರಿಯಿಂದ ಪೇಪರ್‌ಗಳನ್ನು ಎಸೆದಿರುವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯ ನಿದರ್ಶನಗಳನ್ನು ಜೋಶಿ ತಮ್ಮ ಮಂಡನೆಯಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆಯೂ ಇಂತಹ ಅಹಿತಕರ ಘಟನೆಗಳು ಸಂಭವಿಸಿವೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರತಿಪಕ್ಷಗಳಿಗೆ ಜೋಶಿ ಕರೆ ನೀಡಿದರು ಎಂದು ಎಎನ್‌ಐ ವರದಿ ಮಾಡಿದೆ.












Click it and Unblock the Notifications