ಮೇವು ಹಗರಣ: 4 ನೇ ಪ್ರಕರಣದಲ್ಲಿ ಲಾಲೂಗೆ 7 ವರ್ಷ ಜೈಲು
ರಾಂಚಿ, ಮಾರ್ಚ್ 24: ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕನೇ ಪ್ರಕರಣದಲ್ಲಿ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟು 30 ಲಕ್ಷ ರೂ.ಗಳ ದಂಡವನ್ನೂ ವಿಧಿಸಿದೆ.
ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದುಮ್ಕಾ ಖಜಾನೆಯಲ್ಲಿ ನಡೆದ 3.13 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದ ಹಗರಣ ಇದಾಗಿದೆ.

ಇದಕ್ಕೂ ಮುನ್ನ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಹೊರಬಿದ್ದ ಮೂರು ಪ್ರಕರಣಗಳಲ್ಲೂ ದೋಷಿ ಎಂದು ಪರಿಗಣಿಸಲಾಗಿದ್ದ ಲಾಲೂ ಯಾದವ್, ಒಟ್ಟು 13.5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಅದಕ್ಕೆ ಹೆಚ್ಚುವರಿ 7 ವರ್ಷ ಸೇರ್ಪಡೆಯಾದಂತಾಗಿದೆ. ಈ ಮೂಲಕ ನಾಲ್ಕು ಹಗರಣಗಳಿಂದ ಲಾಲೂ ಪ್ರಸಾದ್ ಯಾದವ್ ಒಟ್ಟು 20.5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.
ಮೇವು ಹಗರಣದ ನಾಲ್ಕನೇ ಪ್ರಕರಣದ ತೀರ್ಪು ಮಾ.19 ರಂದು ಹೊರಬಿದ್ದಿತ್ತು. ತೀರ್ಪಿನಲ್ಲಿ ಲಾಲೂ ಪ್ರಸಾದ್ ಯಾದವ್ ರನ್ನು ದೋಷಿ ಎಂದು ಪರಿಗಣಿಸಲಾಗಿತ್ತು. ಈ ಸಂಬಂಧ ಶಿಕ್ಷೆಯ ಪ್ರಮಾಣ ಇಂದು ಪ್ರಕಟಗೊಂಡಿದೆ.












Click it and Unblock the Notifications