49 ರೈಲುಗಳ ಸಂಚಾರ ರದ್ದು, 38 ರೈಲು ಮಾರ್ಗ ಬದಲಾವಣೆ!
ಒಡಿಶಾ: ಭೀಕರ ರೈಲು ಅಪಘಾತ ಸಂಭವಿಸಿದ ಪರಿಣಾಮ ಒಡಿಶಾ ರೈಲು ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ 49 ರೈಲುಗಳ ಸಂಚಾರ ರದ್ದು ಮಾಡಿ, 38 ರೈಲುಗಳ ಮಾರ್ಗ ಬದಲಾವಣೆ ಮಾಡಿದ್ದು ಲಕ್ಷಾಂತರ ರೈಲು ಪ್ರಯಾಣಿಕರನ್ನ ಕಂಗಾಲು ಮಾಡಿದೆ. ಹಾಗಾದ್ರೆ ಕ್ಯಾನ್ಸಲ್ ಆಗಿರುವ ರೈಲು ಯಾವುವು? ತಿಳಿಯೋಣ ಬನ್ನಿ.
ಬೆಂಗಳೂರು & ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇರಿ ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲು ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿರುವ ಅಪಘಾತದ ನಂತರ ಈ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ಅಡಚಣೆ ಎದುರಾಗಿದೆ. ಹೀಗಾಗಿ 49 ರೈಲುಗಳು ರದ್ದಾಗಿದ್ದು, 38 ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಮತ್ತೊಂದು ಸಂಕಷ್ಟ ತಂದೊಡಿತ್ತು (Odisha Train Accident). ಹಾಗಾದ್ರೆ ಯಾವೆಲ್ಲಾ ರೈಲುಗಳು ರದ್ದಾಗಿವೆ, ಯಾವ ಮಾರ್ಗದಲ್ಲಿ ಬದಲಾವಣೆ ಆಗಿದೆ? ಆ ಬಗ್ಗೆ ಮಾಹಿತಿ ಇಲ್ಲಿದೆ.

ಜೀವ ಉಳಿಸಲು ಸಂಚಾರ ಬಂದ್
ಹೌದು, ಒಡಿಶಾ ರೈಲು ದುರಂತದಲ್ಲಿ 240ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ. 200ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಸೇರಿ 45 ಸಂಚಾರಿ ಆರೋಗ್ಯ ತಂಡಗಳು ರಕ್ಷಣಾ ಕಾರ್ಯ ನಡೆಸಿವೆ. ಇದೇ ಕಾರಣಕ್ಕೇ ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರ ಬಂದ್ ಮಾಡಲಾಗಿತ್ತು. ಇನ್ನು ಅಗತ್ಯ ಎನಿಸಿದ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಿ ರೈಲು ಸಂಚಾರಕ್ಕೆ ಸಹಾಯ ಮಾಡಲಾಗಿತ್ತು. ಈಗ ಕ್ಯಾನ್ಸಲ್ ಆಗಿರುವ ರೈಲುಗಳು ಹಾಗೂ ಮಾರ್ಗ ಬದಲಾವಣೆ ಮಾಡಿರುವ ರೈಲುಗಳ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟ್ವೀಟ್ ಮೂಲಕ ಸಂಪೂರ್ಣ ಮಾಹಿತಿ ಹಂಚಿಕೊಳ್ಳಲಾಗಿದೆ.
ದೇಹ ನೋಡಿ ಸಂಬಂಧಿಕರ ಕಣ್ಣೀರು
ಈಗಾಗಲೇ 240ಕ್ಕೂ ಹೆಚ್ಚು ಜನ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತದಲ್ಲಿ ಮೃತಪಟ್ಟಿರುವವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 2 ಲಕ್ಷ ರೂ ಸೇರಿ ಸಣ್ಣಪುಟ್ಟ ಗಾಯದೊಂದಿಗೆ ನರಳುತ್ತಿರುವ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮೃತರ ಸಂಬಂಧಿಕರು ತಮ್ಮವರ ಮೃತ ದೇಹಗಳನ್ನ ನೋಡಿ ಕಣ್ಣಿರು ಹಾಕುತ್ತಿರುವ ದೃಶ್ಯ ಮನಸ್ಸು ಹಿಂಡುವಂತಿದೆ.

ತುರ್ತು ಸಂಪರ್ಕ ಮಾಡಲು ಸಹಾಯವಾಣಿ
ಇನ್ನು ಸಹಾಯವಾಣಿಗೆ ಈ ಸಂಖ್ಯೆಗಳನ್ನ ಸಂಪರ್ಕ ಮಾಡಬಹುದಾಗಿದೆ. ಬಂಗಾರಪೇಟೆ (Bangarpet): 08153 255253, ಬೆಂಗಳೂರು (Bangalor): 080-22356409, ಕುಪ್ಪಂ (Kuppam): 8431403419, ಕೆಜೆಎಮ್ (KJM):+91 88612 03980, ಭದ್ರಕ್ (Bhadrak): 8455889900, ಕಟಕ್ (Cuttack): 8455889917, ಭುವನೇಶ್ವರ (Bhubaneswar): 8455889922, ಖುರ್ದಾ ರಸ್ತೆ (Khurda Road): 6370108046, ಬ್ರಹ್ಮಪುರ (Brahmapur): 89173887241, ಪಲಾಸ (Palasa): 8978881006 ಹಾಗೂ ಹೌರಾ ಸಹಾಯವಾಣಿ ಸಂಖ್ಯೆ (Howrah Helpline Number): 033-26382217 ಗೆ ಸಂಪರ್ಕ ಮಾಡಬಹುದು.
'ಕವಚ' ಇರಲೇ ಇಲ್ಲ ಎಂದ ಅಧಿಕಾರಿಗಳು
ಅಂದಹಾಗೆ ಒಡಿಶಾ ಅಪಘಾತ & 'ಕವಚ' ತಂತ್ರಜ್ಞಾನದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮಾಹಿತಿ ನೀಡಿರುವಂತೆ, 'ರಕ್ಷಣಾ ಕಾರ್ಯಾಚರಣೆ ಪೂರ್ಣ ಮುಗಿದಿದ್ದು, ಮುಂದಿನ ಕಾರ್ಯ ಆರಂಭಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಲಭ್ಯವಿರಲಿಲ್ಲ' ಎಂದು ಭಾರತೀಯ ರೈಲ್ವೆ ಇಲಾಖೆ ವಕ್ತಾರ ಅಮಿತಾಭ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ 'ಕವಚ' ತಂತ್ರಜ್ಞಾನದ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ರೈಲ್ವೆ ಇಲಾಖೆ ಉತ್ತರ ನೀಡಿದಂತಾಗಿದೆ.

ಒಟ್ನಲ್ಲಿ ದೇಶದ ಇತಿಹಾಸದಲ್ಲೇ ಈ ದುರಂತ ಭೀಕರ ಅಧ್ಯಾಯ. ಹೀಗಾಗಿ ರೈಲ್ವೆ ಇಲಾಖೆ ಕೂಡ ಹಗಲು, ಇರುಳು ಎನ್ನದೆ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದ್ಕಡೆ ಒಡಿಶಾದ ಜನರು ಕೂಡ ಗಾಯಾಳುಗಳು ಹಾಗೂ ಮೃತರ ಸಂಬಂಧಿಕರ ನೆರವಿಗೆ ಬಂದು, ಸಹಾಯ ಮಾಡುತ್ತಿದ್ದಾರೆ. ದುರಂತ ಸಂಭವಿಸಿರುವ ಸ್ಥಳದಲ್ಲಿ ರೈಲ್ವೆ ಹಳಿಯು ಕೂಡ ಸಂಪೂರ್ಣ ರಕ್ತದಲ್ಲಿ ಮಿಂದು ಹೋಗಿದೆ.












Click it and Unblock the Notifications