ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ 39 ಮಂದಿಗೆ ಜೈಲಿಗೆ
ನವದೆಹಲಿ, ಮಾರ್ಚ್. 29: ದಕ್ಷಿಣ ಮಧ್ಯ ರೈಲ್ವೇ (ಎಸ್‌ಸಿಆರ್) ನ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ರೈಲುಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದ್ದಕ್ಕಾಗಿ 39 ಅಪರಾಧಿಗಳನ್ನು ಗುರುತಿಸಿ, ಪ್ರಕರಣಗಳನ್ನು ದಾಖಲಿಸಿ, ಬಂಧಿಸಿ ಜೈಲಿಗೆ ಕಳುಹಿಸಿದೆ. ಕಲ್ಲು ತೂರಾಟದಿಂದಾಗಿ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಗಂಭೀರ ಅಪರಾಧವಾಗಿದ್ದು, ರೈಲ್ವೇ ಕಾಯಿದೆಯಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಸಿಆರ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಜೈನ್ ಮಂಗಳವಾರ ತಿಳಿಸಿದ್ದಾರೆ. ಈ ಅಪರಾಧಕ್ಕೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು.

ಕಾಜಿಪೇಟ್ - ಖಮ್ಮಂ, ಕಾಜಿಪೇಟ್ - ಭೋಂಗಿರ್ ಮತ್ತು ಏಲೂರು - ರಾಜಮಂಡ್ರಿ ನಡುವಿನ ವಿಭಾಗಗಳನ್ನು ಕಲ್ಲು ತೂರಾಟದ ಪ್ರದೇಶಗಳೆಂದು ಆರ್‌ಪಿಎಫ್ ಗುರುತಿಸಿದೆ. ಜನವರಿಯಿಂದ ವಂದೇ ಭಾರತ್ ರೈಲುಗಳನ್ನು ದುಷ್ಕರ್ಮಿಗಳು ಗುರಿಯಾಗಿಸುತ್ತಿದ್ದಾರೆ. ಕಲ್ಲು ತೂರಾಟದಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ . ಇದರಿಂದ ರೈಲುಗಳ ವೇಳಾಪಟ್ಟಿಯಲ್ಲೂ ಬಸಲಾವಣೆಯಾಗುತ್ತದೆ. ವೇಳಾಪಟ್ಟಿ ಮರುಹೊಂದಿಸುವ ಕಾರಣ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಅರುಣ್ ಕುಮಾರ್ ಜೈನ್ ಹೇಳಿದ್ದಾರೆ.
ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಕ್ಕಾಗಿ 6 ರಿಂದ 17 ವರ್ಷ ವಯಸ್ಸಿನ ಆರು ಬಾಲಾಪರಾಧಿಗಳು ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ ಎಂದು ಅರುಣ್ ಕುಮಾರ್ ಜೈನ್ ಹೇಳಿದ್ದಾರೆ. ಇಂತಹ ಅಪರಾಧ ಕೃತ್ಯಗಳಿಂದ ದೂರವಿರಲು ನಾಗರಿಕರಲ್ಲಿ ಮನವಿ ಮಾಡಿದ ಅವರು, ಪೋಷಕರು, ಶಿಕ್ಷಕರು ಮತ್ತು ಹಿರಿಯರು ಇಂತಹ ಚಟುವಟಿಕೆಗಳಿಂದ ದೂರವಿರಲು ಮಕ್ಕಳಿಗೆ ಸಲಹೆ, ಶಿಕ್ಷಣ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಒತ್ತಾಯಿಸಿದರು.

ಎಲ್ಲಾ ಕಲ್ಲು ತೂರಾಟದ 'ಬ್ಲ್ಯಾಕ್ ಸ್ಪಾಟ್'ಗಳು ಅಥವಾ ಸಂಭಾವ್ಯ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಸಹ ಅವರನ್ನು 'ಗ್ರಾಮ ಮಿತ್ರ'ರನ್ನಾಗಿ ಮಾಡುವ ಮೂಲಕ ಹಳ್ಳಿಗಳ ಸಮೀಪವಿರುವ ಗ್ರಾಮಗಳ ಸರಪಂಚ್‌ಗಳ ಸಮನ್ವಯದಲ್ಲಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ. ಆರ್‌ಪಿಎಫ್‌ನಿಂದ ತಕ್ಷಣದ ಕ್ರಮಕ್ಕಾಗಿ ಯಾವುದೇ ಮಾಹಿತಿಯನ್ನು ಒದಗಿಸಲು '139' ಗೆ ಡಯಲ್ ಮಾಡುವಂತೆ ಅವರು ಸಾರ್ವಜನಿಕರನ್ನು ವಿನಂತಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಶದ ಸೆಮಿ ಹೈಸ್ಪೀಡ್ ರೈಲಾದ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ರೈಲ್ವೆ ಸಂರಕ್ಷಣಾ ಪಡೆ (RPF) ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಜನವರಿ 2023ರಲ್ಲಿ 21 ಕಲ್ಲು ತೂರಾಟ ಪ್ರಕರಣಗಳನ್ನು ಮತ್ತು ಫೆಬ್ರವರಿ 2023 ರಲ್ಲಿ 13 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಇತ್ತೀಚೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಬೆಂಗಳೂರಿನ ಕೆಆರ್ ಪುರಂ ಬಳಿ ಕಲ್ಲೂ ತೂರಾಟ ನಡೆದಿತ್ತು, ಘಟನೆಯಲ್ಲಿ ರೈಲಿನ ಎರಡು ಗಾಜುಗಳಿಗೆ ಹಾನಿಯಾಗಿದೆ. ರೈಲು ಗಾಡಿ ಸಂಖ್ಯೆ 20608 ಮೈಸೂರು- ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
ಕಲ್ಲು ತೂರಾಟದಿಂದಾಗಿ ಹೈಸ್ಪೀಡ್ ರೈಲಿನ ಕೋಚ್‌ನ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ ಎಂದು ಪೂರ್ವ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ. "ಇದು ಅತ್ಯಂತ ದುರದೃಷ್ಟಕರ ಘಟನೆ. ಈ ಬಗ್ಗೆ ತನಿಖೆ ಆದೇಶಿಸಲಾಗಿದೆ" ಎಂದು ಪೂರ್ವ ರೈಲ್ವೇಯ ಕೌಸಿಕ್ ಮಿತ್ರ ಮಾಹಿತಿ ನೀಡಿ, ತನಿಖೆ ಆರಂಭಿಸಿದ್ದರು.












Click it and Unblock the Notifications