ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಲು 3 ಲಕ್ಷ ಜನರ ನೋಂದಣಿ
ನವದೆಹಲಿ, ಮೇ 06 : ಲಾಕ್ ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಮೇ 7ರಿಂದ ಆರಂಭವಾಗಲಿದೆ. ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಲು ಸುಮಾರು 3 ಲಕ್ಷ ಜನರು ಹೆಸರು ನೋಂದಣಿ ಮಾಡಿಸಿದ್ದಾರೆ.
'ಒಂದೇ ಭಾರತ' ಎಂಬ ಘೋಷಣೆಯಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆಸಲಾಗುತ್ತಿದೆ. ಇದಕ್ಕಾಗಿ ವಿಮಾನ ಮತ್ತು ಹಡಗನ್ನು ಬಳಕೆ ಮಾಡಲಾಗುತ್ತಿದೆ. ವಿದೇಶದಲ್ಲಿ ಪೌರತ್ವ ಹೊಂದಿರುವ ಭಾರತೀಯರನ್ನು ವಾಪಸ್ ಕರೆಸಲಾಗುತ್ತಿಲ್ಲ.
ಮೇ 7 ರಿಂದ 13ರ ತನಕ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ನಡೆಯಲಿದೆ. ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ ಇದ್ದು, ಕಾರ್ಯಾಚರಣೆಯ ಯಶಸ್ಸಿಗೆ ಸಿದ್ಧತೆ ಆರಂಭಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಿದೇಶಿಯರನ್ನು ವಾಪಸ್ ಕರೆಸುವ ಕುರಿತು ರಾಜ್ಯ ಸರ್ಕಾರಗಳ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ವಿದೇಶದಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.
ಸುಮಾರು 1.4 ಕೋಟಿ ಭಾರತೀಯರು ವಿವಿಧ ದೇಶಗಳಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಲಾಗಿದೆ. ರಾಯಭಾರ ಕಚೇರಿ ಮೂಲಕ ಭಾರತಕ್ಕೆ ವಾಪಸ್ ಆಗುವವರ ನೋಂದಣಿ ಮಾಡಿಸಲಾಗುತ್ತಿದೆ. ಕಾರ್ಯಾಚರಣೆ ಹೇಗೆ ನಡೆಯಲಿದೆ ಎಂದು ಸರ್ಕಾರ ಇನ್ನೂ ಬಹಿರಂಗ ಪಡಿಸಿಲ್ಲ.
ಭಾರತೀಯರನ್ನು ವಾಪಸ್ ಕರೆತರಲು ಮಾಲ್ಡೀವ್ಸ್ ಮತ್ತು ಯುಎಇಗೆ ಎರಡು ಹಡಗುಗಳು ಈಗಾಗಲೇ ತೆರಳಿವೆ. ಏರ್ ಇಂಡಿಯಾದ 64 ವಿಮಾನಗಳು ಸಹ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.












Click it and Unblock the Notifications