ಗುಜರಾತ್: ಗೇಮಿಂಗ್ ಝೋನ್‌ನಲ್ಲಿ ಬೆಂಕಿ, 22 ಜನರು ಸಜೀವ ದಹನ
ಅಹಮದಾಬಾದ್, ಮೇ 25: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿ 22 ಜನರು ಸಜೀವವಾಗಿ ದಹನವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಘಟನೆಗೆ ಸಂತಾಪ ಸೂಚಿಸಿದ್ದಾರೆ.
ಶನಿವಾರ ಸಂಜೆ ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ವೇಗವಾಗಿ ಹಬ್ಬಿದ್ದು, ಘಟನೆಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹೆಚ್ಚಿನ ಜನರು ಸಾವನ್ನಪ್ಪಿರುವ ಶಂಕೆ ಇದ್ದು, ನಾಪತ್ತೆಯಾದವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ.

ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ಸಹ ನಡೆಯುತ್ತಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ರಾಜ್‌ಕೋಟ್ ಪೊಲೀಸ್ ಆಯುಕ್ತ ರಾಜು ಭಾರ್ಗವ್ ಮಾತನಾಡಿ, "ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಈಗಿನ ಮಾಹಿತಿ ಪ್ರಕಾರ ಹಲವಾರು ಜನರು ಮೃತಪಟ್ಟಿದ್ದಾರೆ" ಎಂದು ಮಾಧ್ಯಮಗಳಿಗೆ ತಿಳಿಸಿದರು.
ರಾಜ್‌ಕೋಟ್‌ನ ಬಿಜೆಪಿ ಶಾಸಕಿ ದರ್ಶಿತಾ ಶಾ ಮಾತನಾಡಿ, "ಇದೊಂದು ವಿಷಾದಕರವಾದ ಘಟನೆ. ರಾಜ್‌ಕೋಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗೇಮಿಂಗ್ ಝೋನ್‌ನಲ್ಲಿನ ಬೆಂಕಿಗೆ ಮಕ್ಕಳು ಬಲಿಯಾಗಿದ್ದಾರೆ. ರಕ್ಷಣಾ ತಂಡಗಳು ಜನರ ಜೀವ ಉಳಿಸಲು ಪ್ರಯತ್ನ ನಡೆಸಿವೆ. ಸರ್ಕಾರ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಲಿದೆ. ಸದ್ಯಕ್ಕೆ ನಮ್ಮ ಆದ್ಯತೆ ಆದಷ್ಟು ಜನರ ಜೀವ ಉಳಿಸುವುದು" ಎಂದು ಹೇಳಿದ್ದಾರೆ.
ರಾಜ್‌ಕೋಟ್ ಜಿಲ್ಲಾಧಿಕಾರಿ ಪ್ರಭಾವ್ ಜೋಶಿ ಮಾತನಾಡಿ, "ನಮಗೆ 4.30ರ ಸುಮಾರಿಗೆ ಘಟನೆ ಕುರಿತು ಮಾಹಿತಿ ಬಂದಿದೆ. ಗೇಮ್ ಝೋನ್‌ನ ತಾತ್ಕಾಲಿಕ ವೇದಿಕೆ ಕುಸಿದಿದೆ. ಸುಮಾರು 2 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಘಟನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದೇವೆ" ಎಂದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿ, "ಘಟನೆಯಲ್ಲಿ ಮೃತಪಟ್ಟವವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಕೊಡಲಾಗುತ್ತದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, "ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತೀವ್ರ ನೊಂದಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವ ಕಾರ್ಯ ಮಾಡುತ್ತಿದೆ" ಎಂದು ಹೇಳಿದ್ದಾರೆ.
ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 22 ಜನರ ದೇಹಗಳನ್ನು ಗುರುತಿಸಲಾಗಿದೆ. ಯುವರಾಜ್ ಸಿಂಗ್ ಸೋಲಂಕಿ ಎಂಬುವವರಿಗೆ ಸೇರಿದ ಝೋನ್ ಇದಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಘಟನೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕದಳದ ಜೊತೆ ಚರ್ಚಿಸಿದ ಬಳಿಕ ಮಾಹಿತಿ ತಿಳಿಯಲಿದೆ. ಪೊಲೀಸರು ಸಹ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆಸ್ಪತ್ರೆಯಲ್ಲಿರುವ ಶವಗಳನ್ನು ಭಾನುವಾರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಯಾರಾದರೂ ನಾಪತ್ತೆಯಾಗಿದ್ದರೆ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ರಾಜ್‌ಕೋಟ್ ಸ್ಥಳೀಯ ಆಡಳಿತವು ಅವಶೇಷಗಳನ್ನು ತೆರವುಗೊಳಿಸಿ ಸ್ಥಳದಲ್ಲಿ ಯಾರೂ ಸಿಲುಕಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಘಟನೆಯಲ್ಲಿ ಮೃತಪಟ್ಟವರ ಶವಗಳನ್ನು ಗುರುತಿಸಿ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications