21ನೇ ಶತಮಾನದ ಕೌರವರು ಖಾಕಿ ಚಡ್ಡಿ ಧರಿಸಿ ಲಾಠಿ ಹಿಡಿದಿರುತ್ತಾರೆ: ಆರ್‌ಎಸ್‌ಎಸ್ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ, ಜ. 09: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದ್ದು, ಆರ್‌ಎಸ್‌ಎಸ್ ಅನ್ನು "21 ನೇ ಶತಮಾನದ ಕೌರವರು" ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೋಮವಾರ ಸಂಜೆ ಅಂಬಾಲಾ ಜಿಲ್ಲೆಗೆ ತಲುಪಿದೆ. ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು ಹರಿಯಾಣ ಮಹಾಭಾರತದ ನಾಡು ಎಂದು ಮಾತು ಆರಂಭಿಸಿ ಬಳಿಕ ಆರ್‌ಎಸ್‌ಎಸ್ ಮತ್ತು ಆಡಳಿತ ಪಕ್ಷವನ್ನು ಟೀಕಿಸಿದ್ದಾರೆ.

"ಕೌರವರು ಯಾರು..? ನಾನು ಮೊದಲು ನಿಮಗೆ 21 ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ. ಇವರು ಖಾಕಿ ಅರ್ಧ ಪ್ಯಾಂಟ್ ಧರಿಸುತ್ತಾರೆ, ಕೈಯಲ್ಲಿ ಲಾಠಿ ಹಿಡಿದು ಮತ್ತು ಶಾಖೆಗಳನ್ನು ಮಾಡಿಕೊಂಡಿದ್ದಾರೆ. ಈ ಕೌರವರ ಜೊತೆಗೆ ಭಾರತದ ಇಬ್ಬರು, ಮೂವರು ಕೋಟ್ಯಾಧಿಪತಿಗಳು ನಿಂತಿದ್ದಾರೆ" ಎಂದು ಆರ್‌ಎಸ್‌ಎಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
https://twitter.com/ANI/status/1612444900431392769
"ಪಾಂಡವರು ನೋಟು ಅಮಾನ್ಯೀಕರಣ ಮಾಡಿದ್ದಾರೆಯೇ..? ತಪ್ಪು ತಪ್ಪಾಗಿ ಜಿಎಸ್‌ಟಿ ಜಾರಿಗೊಳಿಸಿದ್ದಾರೆಯೇ..? ಅವರು ಎಂದಾದರೂ ಹಾಗೆ ಮಾಡುತ್ತಿದ್ದರೇ..? ಇಲ್ಲ. ಏಕೆಂದರೆ ಅವರು ತಪಸ್ವಿಗಳಾಗಿದ್ದರು. ಆದರೆ, ನರೇಂದ್ರ ಮೋದಿ ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು. ಆದರೆ, ನೀವು ಒಪ್ಪಲಿ ಅಥವಾ ಒಪ್ಪದಿರಿ ಭಾರತದ ಇಬ್ಬರು, ಮೂವರು ಬಿಲಿಯನೇರ್‌ಗಳ ಶಕ್ತಿ ಇದರ ಹಿಂದೆ ಇತ್ತು" ಎಂದಿದ್ದಾರೆ.
"ಒಂದೆಡೆ ಈ ಐವರು ತಪಸ್ವಿಗಳಿದ್ದರು. ಮತ್ತೊಂದೆಡೆ ಕಿಕ್ಕಿರಿದ ಸಂಘಟನೆ. ಪಾಂಡವರೊಂದಿಗೆ ಎಲ್ಲ ಧರ್ಮದವರೂ ಇದ್ದರು. ಈ ರೀತಿಯ (ಭಾರತ್ ಜೋಡೋ) ಯಾತ್ರೆಯಲ್ಲಿ ಯಾರೂ ಎಲ್ಲಿಂದ ಬರುತ್ತಾರೆ ಎಂದು ಯಾರನ್ನೂ ಕೇಳುವುದಿಲ್ಲ. ಇದು ಪ್ರೀತಿಯ ಅಂಗಡಿ, ಪಾಂಡವರೂ ಅನ್ಯಾಯದ ವಿರುದ್ಧ ನಿಂತಿದ್ದರು, ದ್ವೇಷದ ಮಾರುಕಟ್ಟೆಯಲ್ಲಿ ಅವರೂ ಪ್ರೀತಿಯ ಅಂಗಡಿ ತೆರೆದಿದ್ದರು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications