Pulwama Attack: ಯೋಧರ ಮೃತದೇಹ ಮೇಲೆ 2019ರ ಲೋಕಸಭಾ ಚುನಾವಣೆ ನಡೆದಿತ್ತು: ಸತ್ಯಪಾಲ್ ಮಲಿಕ್
ಬೆಂಗಳೂರು, ಮೇ 22: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪುಲ್ವಾಮಾ ದಾಳಿ ವಿಚಾರವಾಗೇ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸೋಮವಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. 2019 ರ ಲೋಕಸಭೆ ಚುನಾವಣೆಯು 'ದೇಶದ ನಮ್ಮ ಸೈನಿಕರ ಮೃತ ದೇಹಗಳ ಮೇಲೆ ನಡೆದಿತ್ತು ಎಂದು ಅವರು ಹೇಳಿದ್ದಾರೆ.
ಈ ಹಿಂದೊಮ್ಮೆ ಇದೇ ವಿಚಾರ ಬಹಿರಂಗಪಡಿಸುವ ಮೂಲಕ ಸುದ್ದಿಯಾಗಿದ್ದ ಸತ್ಯಪಾಲ್ ಮಲಿಕ್ ಅವರು ಪುಲ್ವಾಮಾ ದಾಳಿಯ ವಿಷಯದ ಮೇಲೆ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆ ನಮ್ಮ ಸೈನಿಕರ ದೇಹಗಳ ಮೇಲೆ ನಡೆದಿದೆ. ಅಂದಿನ ಗೃಹ ಸಚಿವರು ಘಟನೆಯ ಬಗ್ಗೆ ತನಿಖೆ ನಡೆಸದಿದ್ದರೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪುಲ್ವಾಮಾ ದಾಳಿ ನಡೆದಾಗ ಘಟನೆ ಬಗ್ಗೆ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದೆ. ಆದರೆ ಈ ವೇಳೆ ಪ್ರಧಾನಿಮಂತ್ರಿಗಳು ನನಗೆ ಮೌನವಾಗಿರಲು, ಸುಮ್ಮನಿರಲು ಹೇಳಿದರು ಎಂದು ಅವರು ತಿಳಿಸಿದರು.
ಸೈನಿಕರ ಸಾವಿನ ಮೇಳೆ ಅಂದಿನ ಚುನಾವಣೆ ನಡೆಸಲಾಯಿತು. ಆ ಬಗ್ಗೆ ಯಾರೊಬ್ಬರು ತನಿಖೆಗೆ ಮುಂದಾಗಲಿಲ್ಲ. ಒಂದು ವೇಳೆ ತನಿಖೆ ನಡೆದಿದ್ದರೆ, ಆಗಿನ ಗೃಹ ಸಚಿವ (ರಾಜನಾಥ್ ಸಿಂಗ್) ರಾಜೀನಾಮೆ ನೀಡಬೇಕಾಗಿತ್ತು. ಅನೇಕ ಅಧಿಕಾರಿಗಳು ಜೈಲು ಪಾಲಾಗುತ್ತಿದ್ದರು. ಈ ಘಟನೆಯ ವಿಚಾರ ದೇಶಾದ್ಯಂತ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು ಎಂದು ಅಲ್ವಾರ್ ಜಿಲ್ಲೆಯ ಬನ್ಸೂರ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಲಿಕ್ ಪ್ರತಿಪಾದಿಸಿದರು.
ಪುಲ್ವಾಮಾ ದಾಳಿ ಬಗ್ಗೆ ವಿವರಿಸಿದ ಮಲಿಕ್
ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯವನ್ನು ವಿಭಜಿಸುವ ಮೊದಲು, ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆಗ ಸ್ಥಳಿಯ ಸಮಸ್ಯೆಗಳ ಬಗ್ಗೆ ಅವರು ಧ್ವನಿ ಎತ್ತಿದ್ದರು. ಇನ್ನು ಪುಲ್ವಾಮಾ ದಾಳಿಯು 2019ರ ಫೆಬ್ರವರಿ 14 ರಂದು ನಡೆದಿದೆ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪರೋಕ್ಷವಾಗಿ ಪ್ರಧಾನಿ ಭಾಗಿಯಾಗಿದ್ದರು. ಪ್ರಧಾನಮಂತ್ರಿಗಳು ಉದ್ಯಾನದಿಂದ ಹೊರಗೆ ಬಂದಾಗ ನನಗೆ ಕರೆ ಬಂದಿತ್ತು. ನಮ್ಮ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ನಮ್ಮ ತಪ್ಪು ನಿರ್ಧಾರಗಳಿಂದ ಸಾವಿಗೀಡಾಗಿದ್ದಾರೆ ಎಂದು ಪ್ರಧಾನಿಗೆ ಹೇಳಿದೆ. ಅವರು ನನಗೆ ಸುಮ್ಮನಿರಲು ಸೂಚಿಸಿದರು ಎಂದು ಸತ್ಯಪಾಲ್ ಮಲಿಕ್ ವಿವರಿಸಿದರು.
ಮಲಿಕ್ ವಿರುದ್ಧ ಲಂಚದ ಆರೋಪ
2018ರ ಆಗಸ್ಟ್ 23ರಿಂದ 2019ರ ಅಕ್ಟೋಬರ್ 30ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ವಿಮಾ ಯೋಜನೆಯ ಫೈಲ್‌ಗಳನ್ನು ತೆರವುಗೊಳಿಸಲು ತನಗೆ 300 ಕೋಟಿ ರೂಪಾಯಿ ಲಂಚದ ರೂಪದಲ್ಲಿ ನೀಡಲಾಗಿತ್ತು. ಈ ಆರೋಪದ ಆಧಾರದಡಿ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಸತ್ಯಾಪಾಲ್ ಮಲಿಕ್ ಅವರನ್ನು ಪ್ರಶ್ನಿಸಿದ್ದರು.
ಉದ್ಯಮಿ ಅದಾನಿಯವರು ಕೇವಲ ಮೂರು ವರ್ಷಗಳಲ್ಲಿ ಅಪಾರ ಪ್ರಮಾಣದಲ್ಲಿ ಶ್ರೀಮಂತರಾದರು. ಇಷ್ಟು ಕಡಿಮೆ ಸಮಯದಲ್ಲಿ ಹೇಗೆ ಶ್ರೀಮಂತರಾಗಲು ಸಾಧ್ಯ? ಎಂದು ಮಲಿಕ್ ಪ್ರಶ್ನಿಸಿದರು.












Click it and Unblock the Notifications