ಉಲ್ಫಾ ಉಗ್ರರಿಂದ 20 ಯೋಧರ ಭೀಕರ ಹತ್ಯೆ
ಇಂಫಾಲ, ಜೂ. 04 : ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀಹೀನ ದಾಳಿಯಲ್ಲಿ 6 ಡೋಗ್ರಾ ಇನ್ಫಂಟ್ರಿ ರೆಜಿಮೆಂಟ್‌ಗೆ ಸೇರಿದ 20 ಜವಾನರನ್ನು ಉಲ್ಫಾ ಮತ್ತು ಎನ್ಎಸ್‌ಸಿಎನ್ ಸೇರಿದಂತೆ ಏಳು ಸಂಘಟನೆಗಳ ಉಗ್ರರು ಮಣಿಪುರದ ಮೋಲ್ಟುಕ್ ಕಣಿವೆಯಲ್ಲಿ ಗುರುವಾರ ಬೆಳಿಗ್ಗೆ ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ 11 ಯೋಧರು ಗಾಯಗೊಂಡಿದ್ದಾರೆ.
ಇಂಫಾಲದಿಂದ 90 ಕಿ.ಮೀ. ದೂರದಲ್ಲಿರುವ ತೆಂಗ್‌ನೌಪಲ್-ನ್ಯೂ ಸಮ್ತಲ್ ರಸ್ತೆಯಲ್ಲಿ ವಾಹನದಲ್ಲಿ ಗಸ್ತು ತಿರುಗುತ್ತಿದ್ದಾಗ ಉಗ್ರರು ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸುಧಾರಿಸ ಸ್ಫೋಟಕ ಸಾಧನ, ಆಟೋಮ್ಯಾಟಿಕ್ ರೈಫಲ್ ಮತ್ತು ಗ್ರೆನೇಡ್‌ಗಳ ಸಹಾಯದಿಂದ ಅವರ ಮೇಲೆ ಉಗ್ರರು ಮುಗಿಬಿದ್ದಿದ್ದಾರೆ.

ಸ್ಥಳದಲ್ಲೇ 20 ಯೋಧರು ಹತ್ಯೆಗೀಡಾಗಿದ್ದಾರೆ. 11 ಜವಾನರು ತೀವ್ರವಾಗಿ ಗಾಯಗೊಂಡಿದ್ದಾರೆ. ಜವಾನರು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಉಗ್ರ ಕೂಡ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ಪ್ರತಿ ಯೋಧನಿಗೆ ಅವರು ಸೆಲ್ಯೂಟ್ ಹೇಳಿದ್ದಾರೆ.
ಏಪ್ರಿಲ್ 2ರಂದು ಎನ್ಎಸ್‌ಸಿಎನ್ ಉಗ್ರ ಸಂಘಟನೆ ಅರುಣಾಚಲದ ತಿರಾಪ್ ಜಿಲ್ಲೆಯಲ್ಲಿ ದಾಳಿ ನಡೆಸಿ ಮೂವರು ಯೋಧರನ್ನು ಹತ್ಯೆಗೈದಿತ್ತು. ಮೇ 3ರಂದು ಉಲ್ಫಾ, ಎನ್ಎಸ್‌ಸಿಎನ್ ಮತ್ತಿತರ ಉಗ್ರ ಸಂಘಟನೆಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಟೆರ್ರಿಟೋರಿಯಲ್ ಆರ್ಮಿಯ ಏಳು ಯೋಧರು ಸಾವಿಗೀಡಾಗಿದ್ದರು.
ಈ ಹಿನ್ನೆಲೆಯಲ್ಲಿ ಸೇನಾಧಿಕಾರಿಗಳ ಉನ್ನತಮಟ್ಟದ ಸಭೆಯನ್ನು ರಕ್ಷಣಾ ಸಚಿವಾಲಯ ಕರೆದಿದ್ದು, ಉಗ್ರ ಸಂಘಟನೆಗಳನ್ನು ಮಟ್ಟಹಾಕಲು ತಂತ್ರವನ್ನು ರೂಪಿಸುತ್ತಿದೆ.












Click it and Unblock the Notifications