ಸಿಖ್ ದಂಗೆ ಪ್ರಕರಣ: ಜೈಲುವಾಸಿ ಸಜ್ಜನ್ ಕುಮಾರ್ ಜಾಮೀನು ಅರ್ಜಿ ವಿಚಾರಣೆಗೆ
ನವದೆಹಲಿ, ನವೆಂಬರ್ 05: 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಎನಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಸಜ್ಜನ್ ಕುಮಾರ್(73) ಅವರ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.
ರಂಜನ್ ಗೊಗಾಯ್ ಅಪ್ರ ಹಿರಿಯ ನ್ಯಾಯವಾದಿ ಶೇಖರ್ ನಫಡೆ ಅವರು ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿದ್ದ ನ್ಯಾಯಪೀಠವು ಸಜ್ಜನ್ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ದೆಹಲಿ ಹೈಕೋರ್ಟ್ 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ದೆಹಲಿ ಹೈಕೋರ್ಟ್ ನೀಡಿರುವ ಜೀವಾವಧಿ ಶಿಕ್ಷೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಸಜ್ಜನ್ ಕುಮಾರ್, ಈ ಪ್ರಕರಣದ ವಿಚಾರಣೆ ಬಾಕಿ ಇರುವ ಕಾರಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಡೆದ ಬೆನ್ನಲ್ಲೇ ನವೆಂಬರ್ 1 ಮತ್ತು 2ರಂದು ದೆಹಲಿಯ ಕೆಲವು ಪ್ರದೇಶಗಳಲ್ಲಿ ಸಿಖ್ ವಿರೋಧಿ ಗಲಭೆ ನಡೆದಿತ್ತು. ಆ ಗಲಭೆಯಲ್ಲಿ ಅನೇಕ ಮಂದಿ ಮೃತಪಟ್ಟಿದ್ದರು. ದೆಹಲಿ ದಂಡು ಪ್ರದೇಶದ ರಾಜ್ ನಗರದಲ್ಲಿ ಐದು ಮಂದಿ ಸಿಖ್ ಸಮುದಾಯದವರ ಸಾವು, ರಾಜ್ ನಗರ ಪಾರ್ಟ್ 2ನಲ್ಲಿದ್ದ ಗುರುದ್ವಾರಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅಪರಾಧಿಯಾಗಿದ್ದಾರೆ.
"ನನ್ನ ತಾಯಿಯ (ಇಂದಿರಾ ಗಾಂಧಿ) ಹತ್ಯೆ ಮಾಡಲಾಗಿದೆ. ಸರ್ದಾರ್ ಗಳನ್ನು ಕೊಲ್ಲಿರಿ" ಎಂದು ಸಿಖ್ ಹತ್ಯಾಕಾಂಡಕ್ಕೆ ಪ್ರೇರೇಪಣೆ ನೀಡಿದ್ದ 73 ವರ್ಷದ ಹಿರಿಯ ರಾಜಕಾರಣಿ, ಕಾಂಗ್ರೆಸ್ ಧುರೀಣ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪನ್ನು ಪಟಿಯಾಲಾ ಕೋರ್ಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನ್ಯಾಯಮೂರ್ತಿ ನಾನಾವತಿ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಸಜ್ಜನ್ ಕುಮಾರ್ ವಿರುದ್ಧ 2005ರಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಲ್ಲದೆ ಸಿಬಿಐ 2010 ಜನವರಿಯಲ್ಲಿ ಕುಮಾರ್ ವಿರುದ್ಧ 2 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು. ಒಮ್ಮೆ ಜಾಮೀನು ಪಡೆದು ಹೊರಬಂದಿದ್ದ ಸಜ್ಜನ್ ಕುಮಾರ್ ಸದ್ಯ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.












Click it and Unblock the Notifications