18 ವರ್ಷದ ನಂತರ ಪತ್ತೆಯಾಯ್ತು ಯೋಧನ ಶವ
ಬೆಂಗಳೂರು, ಆ, 20 : ನಾಪತ್ತೆಯಾಗಿದ್ದ ಯೋಧನ ಶವ 18 ವರ್ಷಗಳ ನಂತರ ಪತ್ತೆಯಾಗಿದೆ. ಡಿಸೆಂಬರ್ 1996ರಲ್ಲಿ ಸೈನ್ಯದಿಂದ ತಪ್ಪಿಸಿಕೊಂಡಿದ್ದ 15ನೇ ರಜಪೂತ ಬೆಟಾಲಿಯನ್‌ನ ಸೈನಿಕ ಹವಿಲ್ದಾರ್ ಗಯಾ ಪ್ರಸಾದ್ ಶವ ಹಿಮದಡಿ ಪತ್ತೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ವಿಶ್ವದ ಅತ್ಯಂತ ಹೆಚ್ಚು ಶೀತ ಪ್ರದೇಶವೆಂದು ಕರೆಸಿಕೊಳ್ಳುವ ಕಾಶ್ಮೀರದ ಸೈಚಿನ್ ಗ್ಲಸರ್ ಬಳಿ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಗಯಾ ಪ್ರಸಾದ್ ಹಿಂದಿರುಗಿರಲಿಲ್ಲ.

ಯೋಧ ನಾಪತ್ತೆಯಾಗಿದ್ದ ವೇಳೆ ಆತನ ಕುಟುಂಬ ಆತ ಸತ್ತಿದ್ದಾನೋ, ಬದುಕಿದ್ದಾನೋ ಎಂದು ಪರಿತಪಿಸಿತ್ತು. ಕೊನೆಗೆ ದೇಹವೂ ಸಿಗದಿದ್ದರಿಂದ ಕನಿಷ್ಠ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಿರಲಿಲ್ಲ. ಈಗ ಆ ಕುಟುಂಬದ ಕರೆ ದೇವರಿಗೆ ಕೇಳಿಸಿತೋ ಎಂಬಂತೆ ಹಿಮದಡಿ ಶವ ಪತ್ತೆಯಾಗಿದೆ.
ಎರಡು ದಿನದ ಹಿಂದೆ ಸೈಚಿನ್ ಗ್ಲಸರ್ ಮಾರ್ಗವಾಗಿ ತೆರಳುತ್ತಿದ್ದ ಪೈಲೆಟ್‌ಗಳು ಯೋಧನ ಶವ ಗುರುತಿಸಿದ್ದಾರೆ. ನಂತರ ಇದನ್ನು ಉತ್ತರ ಪ್ರದೇಶದ ಮಣಿಪುರಿ ಜಿಲ್ಲೆಯ ಕುರಾರ್ಯಾ ಗ್ರಾಮದ ಗಯಾ ಪ್ರಸಾದ್ ಶವ ಎಂದು ಪತ್ತೆಹಚ್ಚಲಾಗಿದೆ.
ಎಲ್ಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗಯಾ ಪ್ರಸಾದ್ ಅವರಿಗೆ ಹೆಂಡತಿ, ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಯೋಧನ ತಾಯಿ ಮಗನ ಬರುವಿಕೆಯಲ್ಲಿ ಕಾದು ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು.
ಯೋಧ ಗಯಾ ಪ್ರಸಾದ್ ತಪ್ಪಿಸಿಕೊಂಡಾಗ ಬಹಳ ಶ್ರಮಪಟ್ಟು ಎಲ್ಲೆಡೆ ಹುಡುಕಾಟ ನಡೆಸಿದ್ದೆವು. ಪರ್ವತ ಪ್ರದೇಶದಲ್ಲಿ, ಹಿಮದಡಿ ಶೋಧ ನಡೆಸಿದ್ದರೂ ಶವ ಪತ್ತೆಯಾಗಿರಲಿಲ್ಲ ಎಂದು ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಯಿತು. ಗಯಾ ಪ್ರಸಾದ್ ಕುಟುಂಬಕ್ಕೆ ಸರ್ಕಾರದ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಯಿತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications