ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಹುದ್ದೆಗೆ 12 ಶಾಸಕರ ರಾಜೀನಾಮೆ; ಬಿಜೆಪಿಗೆ ಗುಳೆ ವದಂತಿ
ಮಣಿಪುರದಲ್ಲಿ ಕಾಂಗ್ರೆಸ್ ಎರಡೂ ಲೋಕಸಭಾ ಸ್ಥಾನಗಳಲ್ಲಿ ಸೋತ ಮೇಲೆ ಪಕ್ಷದ ಹನ್ನೆರಡು ಶಾಸಕರು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ತಮ್ಮ ಹುದ್ದೆಗಳಿಗೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಮಣಿಪುರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಮಿತ್ರ ಪಕ್ಷಕ್ಕೆ ಇವರೆಲ್ಲ ಸೇರ್ಪಡೆ ಆಗುತ್ತಾರೆ ಎಂಬ ಊಹಾಪೋಹ ಸುಳಿದಾಡುತ್ತಿದೆ.
ಆದರೆ, ಶಾಸಕರ ಪೈಕಿ ಒಬ್ಬರಾದ ಗೋವಿಂದಾಸ್ ಕೊತೌಜಾಮ್ ಮಾತನಾಡಿ, ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ಶಾಸಕ, ಪಕ್ಷವನ್ನು ಬೇರು ಮಟ್ಟದಿಂದ ಬಲ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಶಾಸಕ ಕೆ.ಜಾಯ್ ಕಿಶನ್ ಮಾತನಾಡಿ, ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತುಕೊಂಡು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ವಕ್ತಾರ ನಿಂಗೊಂಬಮ್ ಬೂಪೇಂದ್ರ ಮೈತೈ, ಕಾಂಗ್ರೆಸ್ ನ ಆ ಹನ್ನೆರಡು ಶಾಸಕರ ಪೈಕಿ ಯಾರೂ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

2017ರಲ್ಲಿ ನಡೆದ ಚುನಾವಣೆ ವೇಳೆ ಒಟ್ಟು 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 28ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆ ಪೈಕಿ 8 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. 21 ಸ್ಥಾನಗಳಲ್ಲಿ ಜಯಿಸಿದ್ದ ಬಿಜೆಪಿ ಹೇಗೋ ಸರಕಾರ ರಚನೆ ಮಾಡಿತು. ಇನ್ನು ಕಾಂಗ್ರೆಸ್ ನ ಎಂಟು ಶಾಸಕರ ಪೈಕಿ ಒಬ್ಬರು ಸಂಪುಟ ಸಚಿವರಾದರು. ಇತರ ಏಳು ಶಾಸಕರು ವಿರೋಧ ಪಕ್ಷದ ಕುರ್ಚಿಯಲ್ಲೇ ಕೂರುತ್ತಿದ್ದಾರೆ.












Click it and Unblock the Notifications