ತೆಲಂಗಾಣ: 12 ಬಿಆರ್‌ಎಸ್ ಶಾಸಕರು ಕಾಂಗ್ರೆಸ್‌ಗೆ?
ಹೈದರಾಬಾದ್, ಜೂನ್ 18: ತೆಲಂಗಾಣ ರಾಜಕೀಯದಲ್ಲಿ ಕೆಲವು ಬದಲಾವಣೆಯಾಗುತ್ತಿದೆ. ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ 12 ಶಾಸಕರು ಕಾಂಗ್ರೆಸ್ ಸೇರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ರೇವಂತ್ ರೆಡ್ಡಿ ಮುಖ್ಯಮಂತ್ರಿ.
ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಜುಲೈ ಎರಡನೇ ವಾರದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದೆ. ಇದಕ್ಕೂ ಮೊದಲು ಬಿಆರ್‌ಎಸ್‌ನ 12 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಲೋಕಸಭೆ ಚುನಾವಣೆ 2024ಕ್ಕೂ ಮೊದಲು ಮೂವರು ಬಿಆರ್‌ಎಸ್ ಶಾಸಕರು ಕಾಂಗ್ರೆಸ್ ಸೇರಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಬಿಆರ್‌ಎಸ್‌ನ ಕೆಲವು ಶಾಸಕರು, ಮಾಜಿ ಸಚಿವರು ಸಹ ಬಿಜೆಪಿ ಸೇರುವ ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಿಆರ್‌ಎಸ್‌ಗೆ ನಷ್ಟ: 2023ರ ಡಿಸೆಂಬರ್‌ನಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆದಿತ್ತು. ಬಿಆರ್‌ಎಸ್ ಪಕ್ಷ ಅಧಿಕಾರ ಕಳೆದುಕೊಂಡಿತು. 119 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 64, ಬಿಆರ್‌ಎಸ್ 39, ಬಿಜೆಪಿ 8, ಎಐಎಂಐಎಂ 7 ಮತ್ತು ಸಿಪಿಐ 1 ಸ್ಥಾನದಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಸರ್ಕಾರ ರಚನೆಗೊಂಡಿತು, ರೇವಂತ್ ರೆಡ್ಡಿ ಮುಖ್ಯಮಂತ್ರಿಯಾದರು.
ಚುನಾವಣೆ ಬಳಿಕ ಬಿಆರ್‌ಎಸ್‌ನ ಒಬ್ಬರು ಶಾಸಕರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಉಪ ಚುನಾವಣೆಯಲ್ಲಿ ಆ ಸ್ಥಾನ ಕಾಂಗ್ರೆಸ್ ಪಾಲಾಯಿತು. ಲೋಕಸಭೆ ಚುನಾವಣೆ ಸಮಯದಲ್ಲಿ ಮೂವರು ಬಿಆರ್‌ಎಸ್ ಶಾಸಕರು ಕಾಂಗ್ರೆಸ್ ಸೇರಿದರು. ಈಗ 12 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬುದು ಸುದ್ದಿ.
ಕೆ. ಚಂದ್ರಶೇಖರ ರಾವ್ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಶಾಸಕರ ಮನೆಗೆಳಿಗೆ ಭೇಟಿ ನೀಡಿ, ಪಕ್ಷ ಬಿಟ್ಟು ಹೋಗಬೇಡಿ, ಮುಂದಿನ ಚುನಾವಣೆಯಲ್ಲಿ ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಕಳೆದ 10 ವರ್ಷಗಳಲ್ಲಿ ಯಾವುದೇ ಅನುದಾನ ಸರಿಯಾಗಿ ಸಿಕ್ಕಿಲ್ಲ, ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ದಾಳಿ ನಡೆಯಬಹುದು ಎಂದು ಶಾಸಕರು ಹೇಳುತ್ತಿದ್ದು, ಕಾಂಗ್ರೆಸ್ ಸೇರಿ ಉದ್ಯಮ, ಶಾಸಕ ಸ್ಥಾನ ಉಳಿಸಿಕೊಳ್ಳುತ್ತೇವೆ. ಕೆಲವು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನವೂ ಸಿಗಲಿದೆ ಎಂದು ಹೇಳುತ್ತಿದ್ದಾರೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಆಪ್ತವಾಗಿರುವ ನಾಯಕರೇ ಬಿಆರ್‌ಎಸ್ ಶಾಸಕರ ಜೊತೆ ಸಂಪರ್ಕದಲ್ಲಿದ್ದು, ಅವರನ್ನು ಪಕ್ಷಕ್ಕೆ ಕರೆತರುವ ಮಾತುಕತೆ ಆರಂಭಿಸಿದ್ದಾರೆ. ಮೂವರು ಹಿರಿಯ ಬಿಆರ್‌ಎಸ್ ನಾಯಕರು, ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ಇಬ್ಬರು ಕಾಂಗ್ರೆಸ್ ಆಹ್ವಾನವನ್ನು ಒಪ್ಪಿಕೊಂಡಿದ್ದು, ಪಕ್ಷ ಸೇರುವ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆ 2024ರಲ್ಲಿ ರಾಜ್ಯದ 17 ಸೀಟುಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 8 ಮತ್ತು ಎಐಎಂಐಎಂ 1 ಸೀಟುಗಳಲ್ಲಿ ಜಯಗಳಿಸಿದೆ. ಬಿಆರ್‌ಎಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ಈಗ ಶಾಸಕರು ಸಹ ಕಾಂಗ್ರೆಸ್ ಕಡೆ ಹೊರಟಿದ್ದಾರೆ.
ಹೈದರಾಬಾದ್ ವಿಭಾಗದ ನಾಲ್ವರು ಬಿಆರ್‌ಎಸ್ ಶಾಸಕರು ಕಾಂಗ್ರೆಸ್‌ನಲ್ಲಿನ ತಮ್ಮ ಸ್ನೇಹಿತ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿದರೆ ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿ ಅವರು ಹೇಳುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತೆಲಂಗಾಣ ಸಹ ಒಂದು. ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರಲ್ಲಿರುವ ರಾಜ್ಯದಲ್ಲಿ ಕರ್ನಾಟಕ, ತೆಲಂಗಾಣ ಎರಡು ಸೇರಿವೆ. ಆದ್ದರಿಂದ ರಾಜ್ಯದ ಸರ್ಕಾರ ಉಳಿಸಿಕೊಳ್ಳುವುದು ಅನಿವಾರ್ಯ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಹ ಬಿಆರ್‌ಎಸ್ ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಅನುಮತಿಯನ್ನು ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ.












Click it and Unblock the Notifications