108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ: ಏನಿದರ ವಿಶೇಷತೆಗಳು?
ಭೋಪಾಲ್ ಸೆಪ್ಟೆಂಬರ್ 22: ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಬಹುದಿನಗಳ ಕನಸು ನನಸಾಗಿದೆ. ಇದರ ಇನ್ನಷ್ಟು ವಿಶೇಷತೆಗಳ ಬಗ್ಗೆ ತಿಳಿಯೋಣ.
108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೆಪ್ಟೆಂಬರ್ 21ರಂದು ಅನಾವರಣಗೊಳಿಸಿದರು. ಈ ಯೋಜನೆ ಸುಮಾರು 2100 ಕೋಟಿ ರೂಪಾಯಿ ವೆಚ್ಚದ್ದಾಗಿದೆ. ಅಷ್ಟಧಾತುವಿನಿಂದ ನಿರ್ಮಾಣವಾದ ಈ ಪ್ರತಿಮೆಯೊಂದಿಗೆ 'ಅದ್ವೈತ ಲೋಕ' ಹೆಸರಿನ ಮ್ಯೂಸಿಯಂ ಮತ್ತು ಆಚಾರ್ಯ ಶಂಕರ್ ಇಂಟರ್‌ನ್ಯಾಶನಲ್ ಅದ್ವೈತ ವೇದಾಂತ ಸಂಸ್ಥೆಯನ್ನು ಕೂಡ ನಿರ್ಮಿಸಲಾಗಿದೆ.

ಓಂಕಾರೇಶ್ವರ ಆದಿ ಶಂಕರಾಚಾರ್ಯರ ಜ್ಞಾನದ ಸ್ಥಳವಾಗಿತ್ತು. ಆದ್ದರಿಂದ ಅವರ ಭವ್ಯವಾದ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಶಿವನಿಗೆ ಸಮರ್ಪಿತವಾಗಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಓಂಕಾರೇಶ್ವರದಲ್ಲಿರುವುದಕ್ಕೆ ಈ ಸ್ಥಳ ಇನ್ನಷ್ಟು ವಿಶೇಷತೆಯನ್ನು ಪಡೆದುಕೊಂಡಿದೆ. ಎಂಟನೇ ಶತಮಾನದ ತತ್ವಜ್ಞಾನಿ ಮತ್ತು ಹಿಂದೂ ಧರ್ಮದಲ್ಲಿ ಪೂಜಿಸಲ್ಪಟ್ಟ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಏಕತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ.
ಈ ಬೃಹತ್ ಪ್ರತಿಮೆಯು ನರ್ಮದಾ ನದಿಯ ದಡದಲ್ಲಿರುವ ಸುಂದರವಾದ ಬೆಟ್ಟದ ಮೇಲೆ ನೆಲೆಗೊಂಡಿದೆ. ಸೆಪ್ಟೆಂಬರ್ 18 ರಂದು ಭವ್ಯ ಪ್ರತಿಮೆಯನ್ನು ಸಿಎಂ ಅನಾವರಣ ಮಾಡಬೇಕಿತ್ತು. ಆದರೆ ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ಕ್ಕೆ ಮರು ನಿಗದಿಪಡಿಸಲಾಯಿತು.
ಈ ಪ್ರತಿಮೆ ಹಳೆಯ ದೇವಾಲಯಗಳ ವಾಸ್ತುಶಿಲ್ಪ ಶೈಲಿಯಲ್ಲಿದೆ. ಮೂಸಿಯಂನಲ್ಲಿ 3D ಹೊಲೊಗ್ರಾಮ್ ಪ್ರೊಜೆಕ್ಷನ್ ಗ್ಯಾಲರಿಗಳನ್ನು ಇಲ್ಲಿ ಕಾಣಬಹುದು. ತರಬೇತಿ ಕೇಂದ್ರವನ್ನು ಆಚಾರ್ಯರ ತತ್ವಗಳನ್ನು ವಿವರಿಸಲು ಮತ್ತು ಹಂಚಿಕೊಳ್ಳಲು ಕೇಂದ್ರವಾಗಿ ನಿರ್ಮಿಸಲಾಗಿದೆ.

ಕೇರಳದಲ್ಲಿ ಜನಿಸಿದ ಶಂಕರಾಚಾರ್ಯರು ತಮ್ಮ ಬಾಲ್ಯದಲ್ಲಿ ಸನ್ಯಾಸ ಸ್ವೀಕರಿಸಿದ ನಂತರ ಓಂಕಾರೇಶ್ವರವನ್ನು ತಲುಪಿದರು. ಅಲ್ಲಿ ಅವರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಭೇಟಿಯಾದರು. ಅವರು ನಾಲ್ಕು ವರ್ಷಗಳ ಕಾಲ ಈ ಧಾರ್ಮಿಕ ನಗರದಲ್ಲಿ ನೆಲೆಸುವ ಮೂಲಕ ವಿದ್ಯೆಯನ್ನು ಪಡೆದರು ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಂಕರಾಚಾರ್ಯರು ಅದ್ವೈತ ವೇದಾಂತ ತತ್ತ್ವವನ್ನು ಜನರಿಗೆ ಹರಡಲು 12 ನೇ ವಯಸ್ಸಿನಲ್ಲಿ ಓಂಕಾರೇಶ್ವರದೊಂದಿಗೆ ದೇಶದ ಇತರ ಭಾಗಗಳಿಗೂ ಅವರು ತೆರಳಿದರು.
ಆಚಾರ್ಯ ಶಂಕರ್ ಕಲ್ಚರಲ್ ಯೂನಿಟಿ ಟ್ರಸ್ಟ್ ಮತ್ತು ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (MPSTDC) ಮಾರ್ಗದರ್ಶನದಲ್ಲಿ ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ. ಏಕತೆಯ ಪ್ರತಿಮೆಯು ಆದಿ ಶಂಕರಾಚಾರ್ಯರ ಪರಂಪರೆ ಮತ್ತು ಅವರ ಬೋಧನೆಗಳನ್ನು ಪ್ರತಿಬಿಂಬಿಸುತ್ತದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಈ ಹಿಂದೆ ಓಂಕಾರೇಶ್ವರದಲ್ಲಿರುವ ವಸ್ತುಸಂಗ್ರಹಾಲಯದ ಜೊತೆಗೆ ಆದಿ ಶಂಕರಾಚಾರ್ಯರ ಪ್ರತಿಮೆಗಾಗಿ 2,141.85 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿತ್ತು.












Click it and Unblock the Notifications