ಯುಪಿಯ 3 ಗ್ರಾಮಗಳಲ್ಲಿ 100ರಷ್ಟು ಮತದಾನ: ಬೆಂಗಳೂರಲ್ಲಿದ್ದ ವ್ಯಕ್ತಿಯನ್ನು ವಿಮಾನದಲ್ಲಿ ಕರೆಸಿ ಮತದಾನ ಮಾಡಿಸಿದ ಗ್ರಾಮಸ್ಥರು
ಲಕ್ನೋ, ಮೇ 21: ದೇಶಾದ್ಯಂತ ಸಾರ್ವತ್ರಿಕ ಚುನಾವಣಾ ಕಾವು ಇದ್ದು, ಈಗಾಗಲೇ ಐದು ಹಂತದ ಮತದಾನ ಮುಗಿದಿದೆ. ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯ ಚುನಾವಣಾಧಿಕಾರಿಗಳು ನಿರಂತರ ಪ್ರಯತ್ನದ ಮೂಲಕ ದೂರದ ಮೂರು ಹಳ್ಳಿಗಳಲ್ಲಿ ಶೇ. 100ರಷ್ಟು ಮತದಾನದ ಗುರಿ ಸಾಧಿಸಿದ್ದಾರೆ. ಅದಕ್ಕಾಗಿ ಕರ್ನಾಟಕದ ಬೆಂಗಳೂರು ಹಾಗು ಬೇರೆಡೆ ಇದ್ದ ವ್ಯಕ್ತಿಗಳನ್ನು ವಿಮಾನದ ಮೂಲಕ ಕರೆಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲಾ ಚುನಾವಣಾಧಿಕಾರಿಗಳು ಗಡಿಗೆ ಅಂಟಿಕೊಂಡಿರುವ ಸೌಲ್ದಾ, ಬಮ್ಹೌರಿ ನಾಗಲ್ ಮತ್ತು ಬುಧ್ನಿ ನರಹತ್ ಗ್ರಾಮಗಳಲ್ಲಿ ಶೇಕಡಾ 100ರಷ್ಟು ಮತದಾನವನ್ನು ಸಾಧಿಸುವ ಗುರಿ ಹಾಕಿಕೊಂಡಿದ್ದರು. ಅದರಂತೆ ನೆನ್ನೆ ಸೋಮವಾರ ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ಉದ್ದೇಶ ಈಡೇರಿಸಿದ್ದಾರೆ.

ಈ ಗ್ರಾಮಗಳ ನಿವಾಸಿಗಳಲ್ಲಿ ಇಬ್ಬರಲ್ಲಿ ಒಬ್ಬರು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನದ ಮತದಾನ ಕಾರಣಕ್ಕೆ ಅವರಿಗೆ ಗ್ರಾಮಕ್ಕೆ ಬರಲು ಹೆಚ್ಚು ಸಮಯ ಇರಲಿಲ್ಲ. ಆದರೆ ಅವರಿಂದ ಮತದಾನ ಮಾಡಿಸುವ ಮೂಲಕ ಶೇಕಡಾ ನೂರರಷ್ಟು ಗುರಿ ಸಾಧಿಸಬೇಕೆಂದು ಚುನಾವಣಾಧಿಕಾರಿಗಳು, ಗ್ರಾಮಸ್ಥರು ನಿರ್ಧರಿಸಿದ್ದರು.
ವಿಮಾನ ಟಿಕೆಟ್‌ಗಾಗಿ ಗ್ರಾಮದಲ್ಲಿ ಹಣ ಸಂಗ್ರಹ
ಬೆಂಗಳೂರಿನಲ್ಲಿದ್ದ ಶೇರ್ ಸಿಂಗ್ (25) ಅವರು ಸೂಕ್ತ ಸಮಯಕ್ಕೆ ಉತ್ತರ ಪ್ರದೇಶದ ಈ ಹಳ್ಳಿಗೆ ಬರಲು ಸಮಯಾವಕಾಶ ಕೊರತೆ ಮತ್ತು ಹಣದ ಕೊರೆ ಎರಡು ಇತ್ತು. ಹೀಗಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತುಷಾರ್ ಕಟಾರಿಯಾ, ಗ್ರಾಮದ ರೋಜ್‌ಗಾರ್ ಸೇವಕ ಕರಣ್ ಯಾದವ್, ಬಿಎಲ್‌ಒ ರಾಜೇಶ್ ಕುಮಾರ್, ಮಾಜಿ ಪ್ರಧಾನ್ ಅವರ ಪುತ್ರ ಗೋಲು ಯಾದವ್ ಮತ್ತು ಸ್ಥಳೀಯ ನಾಯಕಿ ಜಾಂಕಿ ಬಾಯಿ ಅವರು ಹಣ ಸಂಗ್ರಹಿಸಿದರು.
ಗ್ರಾಮದ ಸ್ಥಳೀಯರು ಬೆಂಗಳೂರಿಂದ ಅವರು ಬರಲು ಹಣ ನೀಡುವ ಮೂಲಕ ಮತದಾನ ಮಹತ್ವ ತಿಳಿಸಿದ್ದಾರೆ. ನಂತರ ಅವರೆಲ್ಲ ಕೂಡಿಕೊಂಡು ಸಿಂಗ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿ ಮತದಾನಕ್ಕೆ ಬರುವಂತೆ ತಿಳಿಸಿದರು. ಅದರಂತೆ ನಿಗದಿತ ಸಮಯಕ್ಕೆ ತೆರಳಿ ಸಿಂಗ್ ಮತ ಚಲಾಯಿಸಿದರು.
ದೆಹಲಿಯಿಂದ ಗ್ರಾಮಕ್ಕೆ ಬಂದ ಜೈದೀಪ್
ಇನ್ನೂ ಮತ್ತೊಬ್ಬರು ಜೈದೀಪ್ (24) ಸೋಮವಾರ ದೆಹಲಿಯಿಂದ ರೈಲಿನಲ್ಲಿ ಬಂದು ಮತ ಚಲಾಯಿಸಿದರು. ಇವರು ದೆಹಲಿ ನಿವಾಸಿಯಾಗಿದ್ದು, ಎಂಎಚ್‌ಎ ಜಂಟಿ ಕಾರ್ಯದರ್ಶಿಗೆ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮತದಾನ ಮಾಡಲು ಸಮಯಕ್ಕೆ ಸರಿಯಾಗಿ ಗ್ರಾಮಕ್ಕೆ ತಲುಪಲು ಡಿಎಂ ಸಹಾಯ ಮಾಡಿದರು.
ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಒಂದೊಂದು ಮತವು ಬಹುಮುಖ್ಯವಾಗಿದೆ. ಯುಪಿಯ ಲಲಿತ್‌ಪುರ ಮತ್ತು ಪೂರ್ವ ದೆಹಲಿ ಡಿಇಒಗಳು ನನ್ನಂತಹ ವ್ಯಕ್ತಿಗೆ ಸಹಾಯ ಮಾಡಲು ಕರ್ತವ್ಯ ವ್ಯಾಪ್ತಿ ಮೀರಿ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಮೂರು ಗ್ರಾಮಗಳಲ್ಲಿ ನೂರರ ಸಂಖ್ಯೆಯ ಮತದಾರರು
ಉತ್ತರ ಪ್ರದೇಶ ರಾಜ್ಯದ ಗಡಿಯಲ್ಲಿರುವ ಈ ಮೂರು ಗ್ರಾಮಗಳಲ್ಲಿ ಕಡಿಮೆ ಜನಸಂಖ್ಯೆ ಇದೆ. ಸೌಲ್ದಾ ಗ್ರಾಮದಲ್ಲಿ 177 ಮಹಿಳೆಯರು ಸೇರಿದಂತೆ 375 ಮತದಾರರಿದ್ದಾರೆ. ಬಮ್ಹೌರಿ ನಾಗಲ್ ನಲ್ಲಿ 206 ಮಹಿಳೆಯರು ಸೇರಿ ಒಟ್ಟು 441 ಮತದಾರರು ಹಾಗೂ ಬುಧ್ನಿ ನರಹತ್ ಹಳ್ಳಿಯಲ್ಲಿ 99 ಮಹಿಳೆಯರು ಸೇರಿದಂತೆ 215 ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications