Coromandel Express Accident: ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ
ಭುವನೇಶ್ವರ: ದೇಶವೇ ಬೆಚ್ಚಿಬೀಳುವ ಅಪಘಾತ ಒಡಿಶಾದ ಬಾಲಸೋರ್ ಪ್ರದೇಶದಲ್ಲಿ ನಡೆದಿದೆ. ಗೂಡ್ಸ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು 50ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೇಂದ್ರ ರೈಲ್ವೆ ಇಲಾಖೆ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ಹಾಗೂ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ನೀಡಲಿದೆ.
ಹೌದು, ಶಾಲಿಮಾರ್ & ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗಾ ರೈಲು ನಿಲ್ದಾಣ ಬಳಿ ಗೂಡ್ಸ್ ರೈಲಿಗೆ ಗುದ್ದಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ (Coromandel Express Train) 8 ಬೋಗಿ ಹಳಿತಪ್ಪಿವೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನ ಮೃತಪಟ್ಟು ಹಾಗೂ 179 ಜನರಿಗೆ ಗಾಯ ಆಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ (Odisha Train Accident). ಇನ್ನು ಭೀಕರ ರೈಲು ಅಪಘಾತದ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ಪ್ರಧಾನಿ ಮೋದಿ ಅಭಯ
ಇಡೀ ದೇಶಕ್ಕೆ ಒಡಿಶಾ ರೈಲು ಅಪಘಾತದ ಸುದ್ದಿ ಸಿಡಿಲಿನಂತೆ ಅಪ್ಪಳಿಸಿದೆ. ಹಾಗೇ ಪ್ರಧಾನಿ ಮೋದಿ ಅವರು ಅಪಘಾತದ ಕುರಿತು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಸಂಕಟವಾಗಿದೆ. ಈ ದುಃಖದ ಸಮಯದಲ್ಲಿ, ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ಹೇಳಲು ಬಯಸುವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವರ ಜತೆ ಮಾತನಾಡಿದ್ದೇನೆ ಹಾಗೂ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದೇನೆ. ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರೈಲ್ವೆ ಸಚಿವರಿಂದ ಪರಿಹಾರ ಘೋಷಣೆ
ಭೀಕರ ರೈಲು ಅಪಘಾತದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಪರಿಹಾರ ಕಾರ್ಯಾಚರಣೆ ಬಗ್ಗೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಮತ್ತೊಂದು ಕಡೆ ಮೃತರು ಹಾಗೂ ಅಪಘಾತದಲ್ಲಿ ಗಾಯಗೊಂಡ ರೈಲು ಪ್ರಯಾಣಿಕರಿಗೆ ಪರಿಹಾರ ಘೋಷಣೆ ಮಾಡಲಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 2 ಲಕ್ಷ ರೂಪಾಯಿ ಸೇರಿ ಸಣ್ಣಪುಟ್ಟ ಗಾಯಗಳೊಂದಿಗೆ ನರಳುತ್ತಿರುವ ಇತರ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.
Distressed by the train accident in Odisha. In this hour of grief, my thoughts are with the bereaved families. May the injured recover soon. Spoke to Railway Minister @AshwiniVaishnaw and took stock of the situation. Rescue ops are underway at the site of the mishap and all…
— Narendra Modi (@narendramodi) June 2, 2023
ದೇಶದ ಇತಿಹಾಸದಲ್ಲೇ ಭೀಕರ ಅಪಘಾತ
ಗಾಯಗೊಂಡ ಪ್ರಯಾಣಿಕರನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಹಲವು ಬೋಗಿಗಳು ಹಳತಪ್ಪಿ ಬಿದ್ದಿರುವ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವೂ ಇದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಎಲ್ಲ ಸೌಲಭ್ಯ ರೈಲ್ವೆ ಇಲಾಖೆ ಒದಗಿಸಿದೆ. ದೇಶದ ಇತಿಹಾಸದಲ್ಲೇ ನಡೆದಿರುವ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದಾಗಿದೆ ಎನ್ನಲಾಗುತ್ತಿದೆ. ಹಾಗೇ ಪೊಲೀಸರು ಸ್ಥಳದಲ್ಲಿರುವ ಜನರನ್ನ ಚದುರಿಸಿ, ಪರಿಹಾರ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಕೋಚ್ ಪಲ್ಟಿ, ಪ್ರಯಾಣಿಕರ ಗತಿ ಏನು?
ಅವರೆಲ್ಲಾ ಅಂದುಕೊಂಡ ಸ್ಥಳಕ್ಕೆ ಹೋಗಬೇಕು ಅಂತಾ ರೈಲು ಹತ್ತಿದ್ದರು. ಹಾಯಾಗಿ ತಮ್ಮ ಜರ್ನಿ ಎಂಜಾಯ್ ಮಾಡುತ್ತಿದ್ದರು. ಆದರೆ ಕತ್ತಲೆ ಒಳಗೆ ದಿಢೀರ್ ಆಘಾತವು ಎದುರಾಗಿದ್ದು, ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಹೀಗೆ ಕ್ಷಣಮಾತ್ರದಲ್ಲಿ ನಡೆದ ಘಟನೆ ಪರಿಣಾಮ ಎಕ್ಸ್‌ಪ್ರೆಸ್ ರೈಲಿನ ಕೋಚ್ ಅಂದರೆ ಬೋಗಿಗಳು ಪಲ್ಟಿಯಾಗಿ ಬಿದ್ದಿವೆ. ಹೀಗೆ ಪಲ್ಟಿಯಾದ ಕೋಚ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ.
Ex-gratia compensation to the victims of this unfortunate train accident in Odisha;
— Ashwini Vaishnaw (@AshwiniVaishnaw) June 2, 2023
₹10 Lakh in case of death,
₹2 Lakh towards grievous and ₹50,000 for minor injuries.
ಒಂದೇ ಹಳಿಗೆ ಬಂದ ರೈಲುಗಳು?
ಅಪಾಘಾತದಲ್ಲಿ ಮೃತಪಟ್ಟಿರುವ ಪ್ರಯಾಣಿಕರ ಸಂಖ್ಯೆ ಇನ್ನೂ ದೃಢವಾಗಿಲ್ಲ. ಆದರೆ ಈ ಹಂತಕ್ಕೆ ಸುಮಾರು 50ಕ್ಕೂ ಹೆಚ್ಚು ಜನ ಮೃತಪಟ್ಟು 179 ಜನರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವು ಬೋಗಿಗಳಲ್ಲಿ ಪ್ರಯಾಣಿಕರ ರಕ್ಷಣಾ ಕಾರ್ಯ ಕೂಡ ಭರದಿಂದ ಸಾಗಿದ್ದು, ಗಾಯಾಳು ಹಾಗೂ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಈ ಘಟನೆಗೆ ಎರಡೂ ರೈಲುಗಳು ಒಂದೇ ಮಾರ್ಗದಲ್ಲಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಿಗ್ನಲ್ ವೈಫಲ್ಯದಿಂದ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಪಘಾತಕ್ಕೆ ಒಳಗಾದ ರೈಲು ಪ.ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಟು ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ಸೇರುತ್ತದೆ. ರೈಲು ಮಧ್ಯಾಹ್ನ 3.30ಕ್ಕೆ ಪ್ರಯಾಣ ಪ್ರಾರಂಭಿಸಿದ್ದು ಸಂಜೆ 6.30ಕ್ಕೆ ಬಾಲಸೋರ್ ನಿಲ್ದಾಣ ತಲುಪಿತು ಅಂತಾ ಹೇಳಲಾಗಿದೆ. ಹಾಗೇ ಇದು ನಾಳೆ ಸಂಜೆ 4.50ಕ್ಕೆ ಚೆನ್ನೈ ತಲುಪಬೇಕಿತ್ತು, ಆದರೆ ಅಷ್ಟರೊಳಗೆ ಈ ಭೀಕರ ಘಟನೆ ಸಂಭವಿಸಿದೆ. ಇನ್ನು ಸರ್ಕಾರದ ಸಹಾಯವಾಣಿಗೆ ಈ ಸಂಖ್ಯೆ ಬಳಸಬಹುದು: 033-26382217, 8972073925, 67822 62286, 9332392339, 8249591559, 7978418322, 9903370746












Click it and Unblock the Notifications