ಹರ್ಯಾಣ: ನಾಲ್ವರು ಮುಸ್ಲಿಂ ಯುವಕರ ಮೇಲೆ ಭೀಕರ ಹಲ್ಲೆ; ಒಬ್ಬ ಸಾವು
ರೈಲಿನಲ್ಲಿ ಸೀಟಿಗಾಗಿ ನಡೆದ ಜಗಳದಲ್ಲಿ ನಾಲ್ವರು ಮುಸ್ಲಿಂ ಯುವಕರ ಮೇಲೆ ಹಲ್ಲೆ. ಸಹ ಪ್ರಯಾಣಿಕರಿಂದ ದಾಳಿ. ನಾಲ್ವರಿಗೆ ಭೀಕರ ಗಾಯ. ನಾಲ್ವರಲ್ಲಿ ಒಬ್ಬ ಸಾವು.
ಬಲಾಬ್ ಗಢ (ಹರ್ಯಾಣ), ಜೂನ್ 23: ಸೀಟುಗಳಿಗಾಗಿ ನಡೆದ ಕಿತ್ತಾಟದಲ್ಲಿ ನಾಲ್ವರು ಮುಸ್ಲಿಂ ಯುವಕರನ್ನು ಪ್ರಯಾಣಿಕರು ಭೀಕರವಾಗಿ ಹೊಡೆದ ಘಟನೆ ದೆಹಲಿಯಿಂದ ಹರ್ಯಾಣಕ್ಕೆ ಬರುತ್ತಿದ್ದ ರೈಲಿನಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ಭೀಕರ ಹಲ್ಲೆಯಿಂದಾಗಿ ನಾಲ್ವರು ಯುವಕರಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ.
ಹಲ್ಲೆಗೀಡಾದ ಯುುವಕರನ್ನು ಜುನೈದ್, ಹಸೀಬ್, ಶಾಕಿರ್ ಹಾಗೂ ಮೊಯ್ಸಿನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಜುನೈದ್ ಹಾಗೂ ಹಸೀಬ್ ಇಬ್ಬರೂ ಅಣ್ಣ ತಮ್ಮಂದಿರು. ನಾಲ್ವರಲ್ಲಿ ಮೃತಪಟ್ಟವನು ಜುನೈದ್ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಾಲ್ವರೂ ಹರ್ಯಾಣದವರೇ. ಸೋಮವಾರ ರಂಜಾನ್ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗಾಗಿ ಇವರು ದೆಹಲಿಗೆ ತೆರಳಿದ್ದರು. ಶಾಪಿಂಗ್ ಮುಗಿಸಿ ರೈಲು ಹತ್ತಿದ್ದ ಈ ನಾಲ್ವರು ಹಾಗೂ ಇತರ ಪ್ರಯಾಣಿಕರ ನಡುವೆ ಸೀಟುಗಳಿಗಾಗಿ ಕಿತ್ತಾಟ ನಡೆದಿದೆ.
ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಜನರು, ಈ ನಾಲ್ವರನ್ನೂ ಚೆನ್ನಾಗಿ ಹೊಡೆದಿದ್ದಾರೆ. ಭೀಕರ ಹಲ್ಲೆಗೆ ಒಳಗಾದ ಕೋಚ್ ನಲ್ಲೇ ರಕ್ತಸ್ರಾವದಿಂದ ನೆಲಕ್ಕುರುಳಿ ನಿತ್ರಾಣರಾಗಿದ್ದಾರೆ. ದೆಹಲಿಯಿಂದ ಹೊರಟ ರೈಲು ಸುಮಾರು 20 ಕಿ.ಮೀ. ಕ್ರಮಿಸಿದ ನಂತರ, ಅಸಾವತಿ ಎಂಬ ನಿಲ್ದಾಣದಲ್ಲಿ ನಿಂತಾಗ, ಈ ನಾಲ್ವರೂ ಯುವಕರನ್ನು ಎತ್ತಿ ಕೋಚ್ ನಿಂದ ಹೊರಗೆ ಫ್ಲಾಟ್ ಫಾರ್ಮ್ ಮೇಲೆ ಬಿಸಾಡಲಾಗಿದೆ.
ಆನಂತರ, ರೈಲು ಹೊರಟುಹೋಗಿದೆ. ಎಲ್ಲರನ್ನೂ ನಿಲ್ದಾಣದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಜುನೈದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದರ ತನಿಖೆ ಈಗ ಆರಂಭವಾಗಿದ್ದು, ಹಲ್ಲೆಯ ಹಿಂದಿನ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications