ಚಿತ್ರಗಳು : ಕಾರವಾರ ನೌಕಾನೆಲೆಗೆ ಶಾಸಕರ ಭೇಟಿ
ಕಾರವಾರ, ನವೆಂಬರ್ 19 : ದೇಶದ ಪ್ರತಿಷ್ಠಿತ ಐಎನ್‍ಎಸ್ ಕದಂಬ ನೌಕಾನೆಲೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು, ಕಾರ್ಯದರ್ಶಿಗಳು ಹಾಗೂ ಕೆಲ ಅಧಿಕಾರಿಗಳು ಭೇಟಿ ನೀಡಿದ್ದರು. ರಕ್ಷಣಾ ವ್ಯವಸ್ಥೆ, ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದರು.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದಂತೆ ನಾಲ್ಕು ಐರಾವತ ಬಸ್‌ಗಳಲ್ಲಿ ಶಾಸಕರು, ಅಧಿಕಾರಿಗಳು ಆಗಮಿಸಿದ್ದರು. ಬೆಳಗ್ಗೆ 11.30ರ ಸುಮಾರಿಗೆ ನೌಕಾನೆಲೆಗೆ ಆಗಮಿಸಿದ ತಂಡ, ಸಂಜೆ 7.30ರವರೆಗೆ ಅಲ್ಲಿ ಸಮಯ ಕಳೆಯಿತು.
ಹಡಗುಗಳಿಗೆ ಇಂಧನ ಸರಬರಾಜು ಮಾಡುವ ಐ.ಎನ್.ಎಸ್ ಆದಿತ್ಯ ಯುದ್ಧನೌಕೆಯಲ್ಲಿ ಎಲ್ಲರನ್ನು ಕರೆದೊಯ್ದು, ಸುಮಾರು ಒಂದೂವರೆ ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸಂಚಾರ ನಡೆಸಲಾಯಿತು. ಬಳಿಕ ಎಲ್ಲರೂ ಅತಿ ದೊಡ್ಡ ಯುದ್ಧನೌಕೆ ಐ.ಎನ್.ಎಸ್ ವಿಕ್ರಮಾದಿತ್ಯವನ್ನು ವೀಕ್ಷಣೆ ಮಾಡಿದರು.
ಶಾಸಕರು, ಅಧಿಕಾರಿಗಳ ತಂಡ 35ಕ್ಕೂ ಅಧಿಕ ಹೆಲಿಕಾಪ್ಟರ್ ಹಾಗೂ ಹಲವು ಯುದ್ಧ ವಿಮಾನಗಳ ಹಾರಾಟವನ್ನು ವೀಕ್ಷಣೆ ಮಾಡಿದರು. ತುರ್ತು ಪರಿಸ್ಥಿತಿಯಲ್ಲಿ ಬಳಸುವ ಶಸ್ತ್ರಾಸ್ತ್ರಗಳನ್ನು ವೀಕ್ಷಿಸಿದರು, ಸಮುದ್ರದಲ್ಲಿ ಬಿದ್ದವರ ಜೀವ ರಕ್ಷಣೆ ಹಾಗೂ ಇತರೆ ಚಟುವಟಿಕೆಗಳ ಕುರಿತು ನೌಕಾನೆಲೆ ಅಧಿಕಾರಿಗಳು ಸಾಕ್ಷ್ಯಚಿತ್ರ ತೋರಿಸಿದರು. ಕದಂಬ ನೌಕಾನೆಲೆ ಹಾಗೂ ಅಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಜನಪ್ರತಿನಿಧಿಗಳಿಗೆ ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದರು.

ರೋಮಾಂಚನಕಾರಿ ಅನುಭವ
ಮಾಧ್ಯಮಗಳ ಜೊತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, 'ಬೆಳಗಾವಿಯಲ್ಲಿ ಅಧಿವೇಶನ ಮುಗಿಸಿದ ನಾವು, ವಿಧಾನಸಭೆಯ ಸಭಾಪತಿಗಳು ಹಾಗೂ ವಿಧಾನ ಪರಿಷತ್‌ನ ಅಧ್ಯಕ್ಷರ ಕರೆಯ ಮೇರೆಗೆ ಇಲ್ಲಿ ಬಂದಿದ್ದೆವು. ಇದರ ವೀಕ್ಷಣೆಗೆ ಅವರು ಪರವಾನಗಿ ಪಡೆದಿರುವ ಕುರಿತು ತಿಳಿಸಿದ್ದರು. ಇದೊಂದು ಉತ್ತಮ ಹಾಗೂ ರೋಮಾಂಚನಕಾರಿ ಅನುಭವ' ಎಂದರು.

ತುಂಬಾ ಸಂತೋಷವಾಯಿತು
ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, '1986ರಲ್ಲಿ ರಾಜೀವ್ ಗಾಂಧಿ ಅವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. 2006ರಲ್ಲಿ ಇದು ಆರಂಭವಾಯಿತು. 5 ತಾಸುಗಳ ತನಕ ಹಡಗನ್ನು ತೋರಿಸಿದರು. ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಕುರಿತು ಮಾಹಿತಿ ಪಡೆದು ಸಂತೋಷವಾಯಿತು' ಎಂದರು.

ಹೆಮ್ಮೆ ಮತ್ತು ಸಂತೋಷ
ಕನ್ನಡದ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ ಮಾತನಾಡಿ, 'ನೌಕಾಪಡೆಗೆ ಸಂಬಂಧಿಸಿದ ಮಾಹಿತಿ ತಿಳಿದು ಹೆಮ್ಮೆ ಮತ್ತು ಸಂತೋಷವಾಯಿತು. ಶತ್ರು ದೇಶಗಳ ಆಕ್ರಮಣಗಳನ್ನು ಹೇಗೆ ತಡೆಯುತ್ತಾರೆ ಎಂಬ ಕುರಿತು ಮಾಹಿತಿ ಪಡೆದವು' ಎಂದು ಸಚಿವರು ಹೇಳಿದರು.

ಸ್ಪೀಕರ್ ಹೇಳಿದ್ದೇನು?
'ಸೀಬರ್ಡ್ ಯೋಜನೆಯಿಂದ ಎಷ್ಟು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ತಿಳಿದಿಲ್ಲ. ಜಿಲ್ಲಾಧಿಕಾರಿಯವರಿಗೆ ನಿರಾಶ್ರಿತರ ಸಂಖ್ಯೆ, ವಿತರಣೆಯಾದ ಪರಿಹಾರ, ಬಾಕಿ ಉಳಿದ ಪರಿಹಾರದ ಅಂಕಿ-ಅಂಶ ನೀಡಲು ತಿಳಿಸಲುತ್ತೇನೆ. ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪರಿಹಾರ ನೀಡಲು ಒತ್ತಾಯಿಸುತ್ತೇವೆ' ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.

ಪ್ರಥಮ ಬಾರಿಗೆ ನೌಕಾನೆಲೆಗೆ ಆಗಮನ
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, 'ಶನಿವಾರ, ಭಾನುವಾರ ಕಲಾಪಕ್ಕೆ ಬಿಡುವು ಇರುವುದರಿಂದ ಮೇಲ್ಮನೆ, ಕೆಳಮನೆಯ ಸದಸ್ಯರೊಂದಿಗೆ ನೌಕಾನೆಲೆಗೆ ಆಗಮಿಸಿದ್ದೇವೆ. ಇದೇ ಪ್ರಥಮ ಬಾರಿಗೆ ಕಾರವಾರದಲ್ಲಿನ ನೌಕಾನೆಲೆಗೆ ಬರುತ್ತಿದ್ದೇವೆ' ಎಂದರು.

ಯಾರು-ಯಾರು ಆಗಮಿಸಿದ್ದರು
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರು, ಶಾಸಕರಾದ ಸತೀಶ ಸೈಲ್, ಟಿ.ಶರವಣ, ಐವನ್ ಡಿಸೋಜಾ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯ್ತಿ ಸಿಇಒ ಚಂದ್ರಶೇಖರ ನಾಯಕ ಇನ್ನಿತರರು ಆಗಮಿಸಿದ್ದರು.












Click it and Unblock the Notifications