ಹೈದರಾಬಾದಿನಲ್ಲಿ ಯಾವುದೇ ಕ್ಷಣ ಬಾಂಬ್ ಸ್ಫೋಟ: NIA
ನವದೆಹಲಿ, ಸೆ.25: ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ಶಂಕಿತ ಉಗ್ರರು ಪರಾರಿಯಾಗಿದ್ದು, ಯಾವುದೇ ಕ್ಷಣ ಅವರಿಬ್ಬರೂ ಹೈದರಾಬಾದಿನಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಕೈಹಾಕಬಹುದು ಎಂದು ರಾಷ್ಟ್ರೀಯ ತನಿಖಾ ದಳ ಎಚ್ಚರಿಸಿದೆ.
ಇಬ್ಬರೂ ಶಂಕಿತ ಉಗ್ರರನ್ನು ತಹಸೀನ್ ಅಖ್ತರ್ ಮತ್ತು ವಖಾಸ್ ಎಂದು ಗುರುತಿಸಲಾಗಿದೆ. ಅಂದಹಾಗೆ ದಿಲ್ ಸುಖ್ ನಗರದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು ಎಂದು NIA ಶಂಕಿಸಿದೆ.

IM ಉಗ್ರರಾದ ಯಾಸಿನ್ ಭಟ್ಕಳ್ ಮತ್ತು ಅವನ ಅನುಚರ ಅಸಾದುಲ್ಲಾ ಅಖ್ತರನನ್ನು ಕಳೆದ ವಾರ ಹೈದರಾಬಾದಿಗೆ ಕರೆತರಲಾಗಿದ್ದು, ಅವರಿಬ್ಬರೂ ಕಳೆದ ಫೆಬ್ರವರಿಯಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ.
ಬಿಹಾರದ ಸಮಸ್ತಿಪುರದಲ್ಲಿ ಮಣಿಯಾರಪುರದ ನಿವಾಸಿ ಮೊಹಮದ್ ವಸೀಂ ಅಕ್ತರ್ ಅವರ ಪುತ್ರನಾದ 23 ವರ್ಷದ ತಹಸೀನ್ ಅಖ್ತರ್ ಅಲಿಯಾಸ್ ಮೋನು ಅಲಿಯಾಸ್ ಹಸನ್ ಮತ್ತು ಪಾಕಿಸ್ತಾನದ ಪ್ರಜೆ ವಖಾಸ್ ಅಲಿಯಾಸ್ ಜಾವೇದ್ ಅಲಿಯಾಸ್ ಅಹಮದ್ ಅವರಿಬ್ಬರೂ ಫೆಬ್ರವರಿ 21ರಂದು ನಡೆದಿದ್ದ Dilsukhnagar bomb blasts ಪ್ರಕರಣದಲ್ಲಿ ಪಾತ್ರಧಾರಿಗಳಾಗಿದ್ದು ಅವರ ಬಗ್ಗೆ ವಿಚಾರಿಸಿದಾಗ ಯಾಸಿನ್ ಭಟ್ಕಳ್ ಈ ಆತಂಕದ ಮಾಹಿತಿ ನೀಡಿದ್ದಾನೆ.
ಇಬ್ಬರ ಬಗ್ಗೆ ಮಾಹಿತಿಗೆ 10 ಲಕ್ಷ ಬಹುಮಾನ: NIA
tourist guide ರೂಪದಲ್ಲಿ ಇವರು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ತಮ್ಮ ದಾಳಿಗೆ ಸ್ಥಳಗಳನ್ನು ಗುರುತಿಸುವ ಕಾಯಕದಲ್ಲಿ ತೊಡಗಿದ್ದಾರೆ ಎಂದೂ NIA ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರಿಬ್ಬರ ಜಾಗ್ರತೆ ವಹಿಸಿ, ಅವರ ಚಲನವಲನಗಳ ಬಗ್ಗೆ ಮಾಹಿತಿ ಸಿಕ್ಕಿದರೆ ತಕ್ಷಣ ತಮಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳು ಕೋರಿದ್ದಾರೆ. ಇವರಿಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿಯೂ NIA ಘೋಷಿಸಿದೆ.
ಈ ಪಾತಕಿಗಳಿಬ್ಬರೂ ಈ ಹಿಂದೆಯೂ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದು, ವಾರಣಾಸಿಯಲ್ಲಿ 2010ರಲ್ಲಿ ಮತ್ತು ಮುಂಬೈ ಸರಣಿ ಬಾಂಬ್ (2011ರಲ್ಲಿ) ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂದು NIA ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಎಲ್ಲ ರಾಜ್ಯಗಳ ಪೊಲೀಸರಿಗೆ ಸಂದೇಶ ರವಾನಿಸಿರುವ NIA, ಭಯೋತ್ಪಾದಕ ದಾಳಿಗಳನ್ನು ನಡೆಸುವ, ಕೋಮು ಸಾಮರಸ್ಯ ಕದಡುವ ಕಾಯಕದಲ್ಲಿ ಇವರಿಬ್ಬರೂ ತೊಡಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಇವರಿಬ್ಬರೂ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಬಾಡಿಗೆ ಮನೆಯನ್ನು ಪಡೆಯುತ್ತಾರೆ. ಇವರು ಕಂಪ್ಯೂಟರ್ ಪ್ರಿಯರಾಗಿದ್ದು ಸೈಬರ್ ಕೆಫೆಗಳಿಗೆ ಭೇಟಿ ನೀಡುತ್ತಾರೆ. ಆಂಡ್ರಾಯ್ಡ್ ಫೋನ್ ಗಳನ್ನು ಬಳಸುತ್ತಾರೆ. ಇಬ್ಬರ ಪೈಕಿ ಪಾಕಿಸ್ತಾನದ ಪ್ರಜೆ ವಖಾಸ್ ಅಲಿಯಾಸ್ ಜಾವೇದ್ ಮುಖ ಪಾರ್ಶ್ವವಾಯು ಪೀಡಿತನಾಗಿದ್ದು, ಆಗಾಗ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುತ್ತಾನೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇವರ ಬಗ್ಗೆ ಮಾಹಿತಿ/ ಸುಳಿವು ಸಿಕ್ಕಿದರೆ [email protected] ವಿಳಾಸಕ್ಕೆ e-mail ಮಾಡಬಹುದು.












Click it and Unblock the Notifications