ಚಿನ್ನ ಸಾಗಣೆ : ಹೈದರಾಬಾದ್ ನಲ್ಲಿ ಬೆಂಗಳೂರಿಗರ ಸೆರೆ
ಹೈದರಾಬಾದ್, ಅ,22 : ಪ್ರಯಾಣಿಕರ ಸೋಗಿನಲ್ಲಿ ಸುಮಾರು 90 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ಮೂವರನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಬಂಧಿಸಲಾಗಿದೆ. ಬಂಧಿತರು ಕರ್ನಾಟಕ ಮೂಲದವರು ಎಂದು ತಿಳಿದು ಬಂದಿದ್ದು, ಬೆಂಗಳೂರಿಗೆ ಈ ಚಿನ್ನವನ್ನು ತರುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಸೋಮವಾರ ರಾತ್ರಿ ಸಿಂಗಾಪುರದಿಂದ ಆಗಮಿಸಿದ ವಿಮಾನದಲ್ಲಿದ್ದ ಸಲ್ಮಾನ್ ಹೈದರ್ ಎಂಬ ಪ್ರಯಾಣಿಕನನ್ನು ಗುಪ್ತಚರ ಇಲಾಖೆಯ ಖಚಿತವಾದ ಮಾಹಿತಿ ಮೇರೆಗೆ ಬಂಧಿಸಿ ವಿಚಾರಣೆ ನಡೆಸಿದಾಗ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಬ್ಯಾಕಾಂಕ್ ನಿಂದ ಬಂದ ವಿಮಾನದಲ್ಲಿದ್ದ ಮಿರ್ ಹುಸೇನ್ ಮತ್ತು ಆತನ ಪತ್ನಿ ಅಮ್ ತುಲ್ ಜಹಾರ ಎಂಬುವವರನ್ನು ಸಲ್ಮಾನ್ ನೀಡಿದ ಮಾಹಿತಿಯಿಂದ ಬಂಧಿಸಲಾಗಿದೆ.

ಬಂಧಿತದಿಂದ ಸುಮಾರು 90 ಲಕ್ಷ ಬೆಲೆ ಬಾಳುವ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಮೂವರ ವಿಚಾರಣೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಪ್ರಯಾಣಿಕರ ಸೋಗಿನಲ್ಲಿ ಮೂವರು ಚಿನ್ನವನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಕರ್ನಾಟಕ ಮೂಲದವರಾಗಿದ್ದು, ಬೆಂಗಳೂರಿಗೆ ವ್ಯಕ್ತಿಯೊಬ್ಬರಿಗೆ ನೀಡಲು ಚಿನ್ನವನ್ನು ಸಾಗಣೆ ಮಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಂಗಾಪುರ್ ಮತ್ತು ಬ್ಯಾಕಾಂಕ್‌ನಿಂದ ಇವರು ಚಿನ್ನವನ್ನು ತರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸಲ್ಮಾನ್ ಹೈದರ್ ಬಳಿ ಒಂದು ಕೆ.ಜಿ.ಚಿನ್ನದ ಗಟ್ಟಿ ಮತ್ತು ಬ್ಯಾಕಾಂಕ್ ವಿಮಾನದ ಮೂಲಕ 12.15ಕ್ಕೆ ಆಗಮಿಸಿದ ಹುಸೇನ್ ಮತ್ತು ಜಹಾರ ಬಳಿ ಉಳಿದ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.












Click it and Unblock the Notifications