ಹೈದ್ರಾಬಾದ್ ನಲ್ಲಿ ಬೀದಿ ಹೆಣವಾದ ಕೊರೊನಾ ವೈರಸ್ ಶಂಕಿತ!
ಹೈದ್ರಾಬಾದ್, ಏಪ್ರಿಲ್.12: ಕೊರೊನಾ ವೈರಸ್ ನಿಯಂತ್ರಣಕ್ಕೆ ವೈದ್ಯರು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಇದರ ನಡುವೆ ಹೈದ್ರಾಬಾದ್ ನಲ್ಲಿ ನಡೆದಿರುವ ಒಂದೇ ಒಂದು ಘಟನೆ ಅಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಹಿಡಿದಿದೆ.
ನೇಪಾಳ ಮೂಲದ ಹಿರಿಯ ವಲಸಿಗನೊಬ್ಬ ಕೊರೊನಾ ವೈರಸ್ ಸೋಂಕು ತಗಿಲಿರುವ ಶಂಕೆಯ ನಡುವೆಯೇ ನಡುಬೀದಿಯಲ್ಲಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು 77 ವರ್ಷದ ಶೇರ್ ಬಹದ್ದೂರ್ ಎಂದು ಗುರುತಿಸಲಾಗಿದೆ.
ಮೃತಪಟ್ಟಿರುವ ವ್ಯಕ್ತಿಯ ಜೇಬಿನಲ್ಲಿ ಕೊರೊನಾ ವೈರಸ್ ತಪಾಸಣೆ ಹಾಗೂ ಸೋಂಕಿತ ಶಂಕೆ ವ್ಯಕ್ತವಾಗಿರುವ ಬಗ್ಗೆ ವೈದ್ಯರು ನೀಡಿರುವ ವರದಿಗಳು ಪತ್ತೆಯಾಗಿವೆ. ಪೊಲೀಸರೇ ಮೃತದೇಹವನ್ನು ಪ್ಲಾಸ್ಟಿಕ್ ನಿಂದ ಕಟ್ಟಿ ರಾತ್ರಿಯಿಡೀ ಕಾದಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿಯಿಡೀ ಪೊಲೀಸರೇ ಕಾದರು ಮೃತದೇಹ
ಹೈದ್ರಾಬಾದ್ ನಲ್ಲಿರುವ ಲಾಲ್ ಪೇಟ್ ಪ್ರದೇಶದಲ್ಲಿ ಇರುವ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಶೇರ್ ಬಹದ್ದೂರ್ ಶುಕ್ರವಾರ ನಡುಬೀದಿಯಲ್ಲೇ ಪ್ರಾಣ ಬಿಟ್ಟಿದ್ದಾರೆ. ನಾರಾಯಣಗುಡ್ ಪ್ರದೇಶದ ವೈಎಂಸಿಎ ಎಕ್ಸ್ ರಸ್ತೆಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಪೊಲೀಸರು ವೈದ್ಯಕೀಯ ಸಿಬ್ಬಂದಿಯ ಆಗಮನಕ್ಕಾಗಿ ಎದುರು ನೋಡುತ್ತಿದ್ದರು. ಆದರೆ ವೈದ್ಯಕೀಯ ಸಿಬ್ಬಂದಿ 12 ಗಂಟೆಗಳ ನಂತರ ಅಂದರೆ ಮರುದಿನ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದಾರೆ.

ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣ
ಕೆಮ್ಮು, ನೆರಗಡಿ ಹಾಗೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೇರ್ ಬಹದ್ದೂರ್ ಗುರುವಾರ ಲಾಲ್ ಪತ್ ಪ್ರದೇಶದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದರು. ಕೊರೊನಾ ಲಕ್ಷಣದ ಶಂಕೆ ವ್ಯಕ್ತವಾದ ಹಿನ್ನೆಲೆ ಕಿಂಗ್ ಕೋತಿ ಪ್ರದೇಶದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಆರೋಗ್ಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು. ಆಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೂ ಕಳುಹಿಸಿ ಕೊಡಲಾಗಿತ್ತು.

ಈ ಆಸ್ಪತ್ರೆಯಿಂದ ಆ ಆಸ್ಪತ್ರೆಗೆ ಶಿಫಾರಸ್ಸು ಪತ್ರ
ಕಿಂಗ್ ಕೋತಿ ಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಶೇರ್ ಬಹದ್ದೂರ್ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಆತನಿಗೆ ಗಾಂಧಿ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದರು. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅದೊಂದೇ ಆಸ್ಪತ್ರೆಯಲ್ಲಿ ವ್ಯವಸ್ಥೆಗಳಿವೆ ಎಂದ ವೈದ್ಯರು ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿರುವುದಾಗಿ ಹೇಳುತ್ತಿದ್ದಾರೆ.

ನಡೆದುಕೊಂಡೇ ಆಸ್ಪತ್ರೆಯಿಂದ ಹೊರ ನಡೆದ ಕೊರೊನಾ ಶಂಕಿತ
ಕಿಂಗ್ ಕೋತಿ ಸರ್ಕಾರಿ ಆಸ್ಪತ್ರೆಯ ಹೊರ ವಿಭಾಗದಲ್ಲಿ ನೂರಾರು ಜನರು ರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಇದರ ಮಧ್ಯೆ ಕೊರೊನಾ ಶಂಕಿತ ಶೇರ್ ಬಹದ್ದೂರ್ ಅವರನ್ನು ಗಾಂಧೀ ಆಸ್ಪತ್ರೆಗೆ ಕಳುಹಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಅಲ್ಲಿವರೆಗೂ ಹೊರಭಾಗದಲ್ಲಿ ಕಾಯುವಂತೆ ಮನವಿ ಮಾಡಿಕೊಂಡಿದ್ದರು. ಹಾಗಿದ್ದರೂ ವ್ಯಕ್ತಿ ನಾಲ್ಕು ಕಿಲೋ ಮೀಟರ್ ಇರುವ ಗಾಂಧೀ ಆಸ್ಪತ್ರೆಗೆ ನಡೆದುಕೊಂಡೇ ಹೋಗಲು ತೀರ್ಮಾನಿಸಿದರೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ನಾರಾಯಣಗುಡ್ ಇನ್ಸ್ ಪೆಕ್ಟರ್ ಕರ್ನಾಕರ್ ರೆಡ್ಡಿ ತಿಳಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿಗೆ ಗೊತ್ತಿಲ್ಲದೇ ಕೊರೊನಾ ಶಂಕಿತ ನಾಪತ್ತೆ
ಕೊರೊನಾ ಶಂಕೆ ವ್ಯಕ್ತವಾದ ಬಳಿಕವೂ ಕಿಂಗ್ ಕೋತಿ ಆಸ್ಪತ್ರೆ ಸಿಬ್ಬಂದಿ ಆತನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇಕೆ. ವೈದ್ಯರ ಅನುಮತಿಯಿಲ್ಲದೇ ಆತನನ್ನು ಹೊರಗೆ ಹೋಗಲು ಬಿಟ್ಟಿದ್ದೇಕೆ. ಗಾಂಧಿ ಆಸ್ಪತ್ರೆಗೆ ತತ್ ಕ್ಷಣಕ್ಕೆ ಏಕೆ ಆತನನ್ನು ರವಾನಿಸಲಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಇಲ್ಲಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ನೆರವಾಗದ 104 ಮತ್ತು 108 ಸಹಾಯವಣಿ
ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬ ಮೃತಪಟ್ಟಿರುವ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆತನ ಜೇಬಿನಲ್ಲಿದ್ದ ಕೊರೊನಾ ವೈರಸ್ ತಪಾಸಣೆಯ ಚೀಟಿಗಳನ್ನು ನೋಡಿ ವೈದ್ಯರನ್ನು ಸಂಪರ್ಕಿಸಲು ಹರಸಾಹಸ ಪಟ್ಟರು. ಈ ಸಮಯದಲ್ಲಿ 104 ಮತ್ತು 108 ಸಹಾಯವಾಣಿ ಕೂಡಾ ಪೊಲೀಸರ ನೆರವಿಗೆ ಬರಲಿಲ್ಲ. ಹೀಗಾಗಿ ಪೊಲೀಸರೇ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ರಾತ್ರಿಯಿಡೀ ಇಬ್ಬರು ಪೊಲೀಸರು ಮೃತದೇಹವನ್ನು ಕಾದಿದ್ದಾರೆ.












Click it and Unblock the Notifications