ಮುಖಾಮುಖಿ ಡಿಕ್ಕಿಯಾದ ರೈಲುಗಳು: ಭೀಕರ ಘಟನೆಯ ವಿಡಿಯೋ
Recommended Video
ಹೈದರಾಬಾದ್, ನವೆಂಬರ್ 11: ಹೈದರಾಬಾದ್‌ನ ಕಾಚಿಗುಡ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಎರಡು ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ಭೀಕರ ಅಪಘಾತ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದ ಇಬ್ಬರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಎರಡು ರೈಲುಗಳ ಪೈಕಿ ಒಂದರ ಚಾಲಕ ರೈಲುಗಳ ಮುಖಾಮುಖಿಯಿಂದ ಛಿದ್ರಗೊಂಡ ಅವಶೇಷಗಳ ನಡುವೆ ಇನ್ನೂ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.
ಆತನನ್ನು ಹೊರತೆಗೆಯುವ ಕೆಲಸ ನಡೆಯುತ್ತಿದ್ದು, ಆಮ್ಲಜನಕ ರವಾನಿಸಲಾಗುತ್ತಿದೆ. ವೈದ್ಯಕೀಯ ಸಹಾಯಕರ ತಂಡ ಸ್ಥಳದಲ್ಲಿಯೇ ಮೊಕ್ಕಾ ಹೂಡಿದೆ. ರಕ್ಷಣಾ ತಂಡ ಆತನನ್ನು ಸುರಕ್ಷಿತವಾಗಿ ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿದೆ.
ಆರಂಭದಲ್ಲಿ ಈ ಅಪಘಾತ ತಾಂತ್ರಿಕ ಪ್ರಮಾದಿಂದ ಉಂಟಾದ ಸಮಸ್ಯೆಯಿಂದಾಗಿ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ ಪ್ರಾಥಮಿಕ ತನಿಖೆಗಳು ಈ ಅಪಘಾತಕ್ಕೆ ಮಾನವ ತಪ್ಪುಗಳೇ ಕಾರಣ ಹೊರತು ತಾಂತ್ರಿಕ ಸಮಸ್ಯೆಯಲ್ಲ ಎಂದು ಸಾಬೀತುಪಡಿಸಿವೆ ಎಂದು ದಕ್ಷಿಣ-ಕೇಂದ್ರ ರೈಲ್ವೆಯ ಹೆಚ್ಚುವರಿ ಮಹಾ ವ್ಯವಸ್ಥಾಪಕ ಬಿಬಿ ಸಿಂಗ್ ತಿಳಿಸಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವೇಗ ಕಡಿಮೆ ಇತ್ತು
ಅದೃಷ್ಟವಶಾತ್ ಅಪಘಾತ ಸಂಭವಿಸಿದ ವೇಳೆ ಎರಡೂ ರೈಲುಗಳ ವೇಗ ಸಾಕಷ್ಟು ತಗ್ಗಿತ್ತು. ಮುಖಾಮುಖಿ ಡಿಕ್ಕಿಯಾದ ಹೊಡೆತಕ್ಕೆ ರೈಲುಗಳ ಬೋಗಿಗಳು ಮೇಲೆದ್ದು ಕೆಲವು ಅಡಿಗಳವರೆಗೆ ದೂರದಲ್ಲಿ ತುಂಡಾಗಿ ಬಿದ್ದ ಭೀಕರ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಈ ರೈಲುಗಳು ವೇಗವಾಗಿ ಚಲಿಸುತ್ತಿದ್ದರೆ ಭಾರಿ ಪ್ರಮಾಣದ ಜೀವ ಹಾನಿ ಸಂಭವಿಸುವ ಅಪಾಯವಿತ್ತು.

ಒಂಬತ್ತು ಭೋಗಿಗಳು ಜಖಂ
ಎಂಎಂಟಿಎಸ್ ರೈಲಿನ ಆರು ಭೋಗಿಗಳು ಮತ್ತು ಹಂಡ್ರಿ ಎಕ್ಸ್‌ಪ್ರೆಸ್ ರೈಲಿನ ಮೂರು ಭೋಗಿಗಳು ಹಾನಿಗೊಳಗಾಗಿವೆ. ಅಪಘಾತದಲ್ಲಿ 12 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಇಬ್ಬರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ದಕ್ಷಿಣ ಕೇಂದ್ರ ರೈಲ್ವೆ ಹೇಳಿಕೆ ತಿಳಿಸಿದೆ.

ಗಾಯಾಳುಗಳಿಗೆ ಪರಿಹಾರ
ರೈಲ್ವೆ ಸಚಿವಾಲಯವು ಸಣ್ಣಪುಟ್ಟ ಗಾಯಗೊಂಡವರಿಗೆ 5 ಸಾವಿರ ರೂ ಮತ್ತು ಅಧಿಕ ಗಾಯಗೊಮಡವರಿಗೆ 15 ಸಾವಿರ ರೂ ಪರಿಹಾರ ಘೋಷಣೆ ಮಾಡಿದೆ. ಘಟನೆಯಿಂದಾಗಿ ದಕ್ಷಿಣ ಕೇಂದ್ರ ರೈಲ್ವೆಯು ಕನಿಷ್ಠ 20 ರೈಲುಗಳ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸುವಂತಾಯಿತು.

ಪ್ರಯಾಣಿಕರಲ್ಲಿ ಭಯ
ಈ ಘಟನೆಯಿಂದ ಎಲ್ಲ ಪ್ರಯಾಣಿಕರೂ ಭಯಗೊಂಡಿದ್ದಾರೆ. ಅದರಲ್ಲಿಯೂ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು. ಕೆಲವು ಪ್ರಯಾಣಿಕರ ತಲೆ ಮತ್ತು ಮೊಣಕಾಲುಗಳು ಎದುರಿನ ಸೀಟುಗಳಿಗೆ ಹೊಡೆದ ರಭಸಕ್ಕೆ ಪೆಟ್ಟಾಗಿದ್ದು ಗಾಯ ಸುರಿಯುವಂತಾಗಿತ್ತು ಎಂದು ಮತ್ತೊಬ್ಬ ಪ್ರಯಾಣಿಕರು ಹೇಳಿದರು.












Click it and Unblock the Notifications