ವರುಣನ ಆರ್ಭಟಕ್ಕೆ ಧಾರವಾಡ ಜಿಲ್ಲೆ ತತ್ತರ: 2 ದಿನ ಯಲ್ಲೋ ಅಲರ್ಟ್
ಧಾರವಾಡ, ಅಕ್ಟೋಬರ್ 12 : ಕಳೆದ ಎರಡು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರ ಜೋರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ ಸಮಯ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ತುಂಬಿ ಹರಿಯುತ್ತಿದ್ದು, ಹಲವು ಬೈಕ್‌ಗಳು ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ.
ಇನ್ನು ಭಾರಿ ವರ್ಷಧಾರೆಯಿಂದ ಹಳ್ಳ ಕೊಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕೆಲವು ಗ್ರಾಮಗಳು ಜಲಾವೃತವಾಗಿದ್ದು, ಗ್ರಾಮೀಣದ ಜನ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅಪಾಯದ ಪ್ರಮಾಣ ದಾಟಿ ತುಪ್ಪರಿ ಹಳ್ಳ ಹರಿಯುತ್ತಿದೆ. ಹಳ್ಳ ತುಂಬಿ ಹರಿಯುತಿದ್ದರೂ ಹಳ್ಳದ ಮೇಲೆ ಹೋಗುವ ಹುಚ್ಚು ಸಾಹಸಗಳು ನಡೆಯುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ.
ನವಲಗುಂದ ತಾಲೂಕುನಲ್ಲಿ ಗ್ರಾಮಗಳು ಜಲಾವೃತ
ಎರಡು ದಿನಗಳಿಂದ ರಾತ್ರಿ ಸುರಿದ ಮಳೆಗೆ ನವಲಗುಂದ ಭಾಗದಲ್ಲೂ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಉಕ್ಕಿ ಹರಿದ ಹಳ್ಳದ ನೀರು ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಮಳೆಯ ಆರ್ಭಟಕ್ಕೆ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳಗಳು ತುಂಬಿ ಹರಿದು ಗ್ರಾಮಗಳಿಗೆ ನುಗ್ಗಿವೆ. ಇದರಿಂದ ಮನೆಯಲ್ಲಿ ನೆಮ್ಮದಿಯಿಂದ ಮಲಗಬೇಕಿದ್ದ ಜನರು ಜಾಗರಣೆ ಮಾಡುವಂತಾಗಿದೆ. ತಾಲೂಕಿನ ಅರೆಕುರಹಟ್ಟಿ ಶಿರಕೋಳ ಮೊರಬಾ ಸೇರಿದಂತೆ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ. ಹಲವೆಡೆ ಮನೆಗಳು ಧರೆಗುರುಳಿವೆ. ಇನ್ನೂ ನೀರು ಮನೆಗೆ ನುಗ್ಗಿ ಶೇಖರಿಸಿಟ್ಟ ದವಸ ಧಾನ್ಯಗಳು ನೀರು ಪಾಲಾಗಿವೆ. ಹಲವು ಕಡೆ ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆ ಹಾನಿಯಾಗಿದೆ. ಮಳೆಯಿಂದ ಮತ್ತೆ ರೈತ ಸಂಕಷ್ಟಕ್ಕೀಡಾಗಿದ್ದಾನೆ.

ಕೊಚ್ಚಿ ಹೋದ ಬೈಕ್‌ಗಳು
ಮಳೆಯ ಹೊಡೆತಕ್ಕೆ ಹುಬ್ಬಳ್ಳಿ - ಧಾರವಾಡ ಅಲ್ಲೋಲ ಕಲ್ಲೋಲವಾಗಿದೆ. ರಸ್ತೆಗಳಲ್ಲಿ ನೀರಿನಿಂದ ತುಂಬಿ ಹರಿದಿವೆ. ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ಬೈಕ್‌ಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ರಾತ್ರಿಯಿಡೀ ಮಳೆಯಾಗಿದ್ದರಿಂದ ನಗರದ ದಾಜೀಬಾನ ಪೇಟೆ, ಕುಂಬಾರ ಓಣಿ, ಲೋಕ ಪೋಪನ ಹಕ್ಕಲ, ಮಂಜುನಾಥ ನಗರ ಸೇರಿ ಹಲವು ಬಡಾವಣೆ ಜಲಾವೃತವಾಗಿವೆ. ಕೆಲ ಅಪಾರ್ಟ್ ಮೆಂಟ್ ಗಳಿಗೆ ಮಳೆ ನೀರು ನುಗ್ಗಿದೆ.
ಹುಬ್ಬಳ್ಳಿ ನಗರದಲ್ಲಿ ಹಲವು ಕಡೆ ಜಲಾವೃತಗೊಂಡಿರುವುದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ ಸಹಾಯವಾಣಿ ಆರಂಭಿಸಿದೆ. ವಿವಿಧ ಜೋನ್‌ಗೆ ಅಧಿಕಾರಿಗಳ ನೇಮಕ ಮಾಡಿ ತೊಂದರೆಯಲ್ಲಿರುವವರಿಗೆ ಅಧಿಕಾರಗಳ ನಂಬರ್ ಕರೆ ಮಾಡುವಂತೆ ಮೇಯರ್ ಈರೇಶ್ ಅಂಚಟಗೇರಿ ಮನವಿ ಮಾಡಿದ್ದಾರೆ.

ಯಲ್ಲೋ ಅಲರ್ಟ್ ಘೋಷಣೆ
ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಸೇರಿದಂತೆ, ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಹವಾಮಾನ ವಿಭಾಗದಿಂದ ಮಾಹಿತಿ ನೀಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications