Dharwad-Belagavi New Railway line: ಕಾಮಗಾರಿ ಮುಗಿಯುವುದು ಯಾವಾಗ? ರೈಲು ನಿಲುಗಡೆಗೆ ಕ್ರಮ
ಹುಬ್ಬಳ್ಳಿ, ಜೂನ್ 19: ಜನರಿಗೆ ಅಗ್ಗದ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆಯ ಕರ್ನಾಟಕದ ನೈಋತ್ಯ ವಲಯದಲ್ಲಿನ ಹೊಸ ರೈಲು ಮಾರ್ಗದ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.
ಹುಬ್ಬಳ್ಳಿ ನಗರದ ಗದಗ ರಸ್ತೆಯ ರೈಲ್ ಸೌಧದಲ್ಲಿ ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ ನೇತೃತ್ವದಲ್ಲಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಅಧಿಕಾರಿಗಳ ಜೊತೆಗೆ ಬುಧವಾರ ಸಭೆ ನಡೆಯಿತು.

ಹುಬ್ಬಳ್ಳಿಯಿಂದ ಧಾರವಾಡ, ಕಿತ್ತೂರು ಮಾರ್ಗವಾಗಿ ಬೆಳಗಾವಿವರೆಗಿನ ನೂತನ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬೆಳಗಾವಿ ಮೀರಜ್ ನಡುವೆ ಈ ಹಿಂದೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲುಗಳನ್ನು ಪುನಃ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಕ್ರಮ
ಈ ವೇಳೆ ಪಂಢರಾಪುರ ಹಾಗೂ ರಾಜಸ್ಥಾನದ ಕಡೆಗೆ ತೆರಳುವ ರೈಲುಗಳನ್ನು ಖಾನಾಪುರ, ಘಟಪ್ರಭಾ, ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಕ್ರಮ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಇನ್ನೂ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ಇರುವ ತೊಡಕುಗಳು ಹಾಗೂ ನಿವಾರಣೆಗಳ ಕುರಿತು ಚರ್ಚಿಸಲಾಯಿತು. ಆದಷ್ಟು ಬೇಗ ಅಲ್ಲಿಯವರೆಗೆ ರೈಲು ಓಡಿಸಲು ಇಲಾಖೆ ಮುಂದಾಗಬೇಕು ಎಂದು ರಾಜ್ಯಸಭಾ ಸದಸ್ಯರಾದ ವೀರಣ್ಣ ಕಡಾಡಿ ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿದ್ದು, ಈ ಭಾಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಬೈ, ದೆಹಲಿ, ತಿರುಪತಿ, ಮಂಗಳೂರು, ಹೈದರಾಬಾದ್, ಬೀದರ್ ಹಾಗೂ ಸೊಲ್ಲಾಪುರ ನಗರಗಳನ್ನು ಸಂಪರ್ಕಿಸುವ ನೂತನ ರೈಲುಗಳನ್ನು ಪ್ರಾರಂಭಿಸುವ ಕುರಿತು ಚರ್ಚಿಸಲಾಯಿತು.
ಈ ಹಿಂದೆಯು ಕೆಲವು ಸಂಘ ಸಂಸ್ಥೆಗಳು, ಸ್ಥಳೀಯ ನಿವಾಸಿಗಳು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, ಸುನೀಲ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications